ನವದೆಹಲಿ: ಕೇಂದ್ರ ಸರ್ಕಾರಿ(Central Government) ನೌಕರರ (Employees) ಬಹುದಿನಗಳ ನಿರೀಕ್ಷೆಯಾದ 8ನೇ ವೇತನ ಆಯೋಗದ (8th Pay Commission) ರಚನೆ ಮತ್ತು ವೇತನ ಪರಿಷ್ಕರಣೆ ಕುರಿತಾದ ಚರ್ಚೆಗಳು ಈಗ ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿವೆ.
ಕೇವಲ ಸಂಬಳದ (Salary) ಏರಿಕೆಯಷ್ಟೇ ಅಲ್ಲದೆ, ಆರ್ಥಿಕ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಈ ಪ್ರಕ್ರಿಯೆಯಲ್ಲಿ ಈಗ ಹೊಸದೊಂದು ಮಹತ್ವದ ಪ್ರಸ್ತಾಪ ಮುಂಚೂಣಿಗೆ ಬಂದಿದೆ.
ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘವು (IRTSA) ವಿವಿಧ ವೇತನ ಶ್ರೇಣಿಗಳಿಗೆ ಪ್ರತ್ಯೇಕವಾಗಿ 5 ಹಂತದ ಫಿಟ್‌ಮೆಂಟ್ ಫ್ಯಾಕ್ಟರ್ ಸೂತ್ರವನ್ನು ಜಾರಿಗೆ ತರಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಒಂದು ವೇಳೆ ಈ ವಿಶಿಷ್ಟ ಫಾರ್ಮುಲಾಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ, ಉನ್ನತ ಅಧಿಕಾರಿಗಳ ಸಂಬಳದಲ್ಲಿ ಶೇಕಡ 400ಕ್ಕಿಂತಲೂ ಅಧಿಕ ಬಂಪರ್ ಹೆಚ್ಚಳವಾಗುವ ಸಾಧ್ಯತೆಯಿದೆ.
ಪ್ರಸ್ತಾಪಿತ 5 ಹಂತದ ಫಿಟ್‌ಮೆಂಟ್ ಫ್ಯಾಕ್ಟರ್ ವಿವರ ಹೀಗಿದೆರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘವು ನೌಕರರ ಶ್ರೇಣಿಗೆ ಅನುಗುಣವಾಗಿ ಈ ಕೆಳಗಿನಂತೆ ಫಿಟ್‌ಮೆಂಟ್ ಫ್ಯಾಕ್ಟರ್‌ಗಳನ್ನು ಬಳಸಲು ಕೋರಿದೆ.
- ಲೆವೆಲ್ 1 ರಿಂದ 5: 2.92 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 6 ರಿಂದ 8: 3.50 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 9 ರಿಂದ 12: 3.80 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 13 ರಿಂದ 16: 4.09 ಫಿಟ್‌ಮೆಂಟ್ ಫ್ಯಾಕ್ಟರ್
- ಲೆವೆಲ್ 17 ರಿಂದ 18: 4.38 ಫಿಟ್‌ಮೆಂಟ್ ಫ್ಯಾಕ್ಟರ್
ಹಿಂದಿನ 7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 2.57 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈಗ IRTSA ಪ್ರಸ್ತಾಪಿಸಿರುವ ಹೊಸ ಸೂತ್ರ ಅನ್ವಯವಾದರೆ ಸಂಬಳದ ಚಿತ್ರಣವೇ ಬದಲಾಗಲಿದೆ.
- ಹಿರಿಯ ಅಧಿಕಾರಿಗಳು (ಲೆವೆಲ್ 17-18): ಪ್ರಸ್ತುತ 2.5 ಲಕ್ಷ ರೂಪಾಯಿ ಮೂಲ ವೇತನ (Basic Pay) ಪಡೆಯುತ್ತಿರುವ ಉನ್ನತ ಅಧಿಕಾರಿಯ ಸಂಬಳ ಸರಿಸುಮಾರು 10.95 ಲಕ್ಷ ರೂಪಾಯಿ ಹೆಚ್ಚಾಗಲಿದೆ.
- ಮಧ್ಯಮ ಶ್ರೇಣಿ ನೌಕರರು (ಲೆವೆಲ್ 6-8): ಪ್ರಸ್ತುತ 45,000 ರೂಪಾಯಿ ಮೂಲ ವೇತನ ಹೊಂದಿರುವ ನೌಕರರ ಸಂಬಳ1.57 ಲಕ್ಷ ರೂಪಾಯಿ ಆಗಲಿದೆ.
ಇನ್ನು, ಜೂನಿಯರ್ ಹಾಗೂ ಸೀನಿಯರ್ ಸಿಬ್ಬಂದಿಗಳ ನಡುವಿನ ವೇತನದ ಅಂತರ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪ್ರಮುಖವಾಗಿ ರೈಲ್ವೆಯ ಸುರಕ್ಷತಾ ವಿಭಾಗದಲ್ಲಿ ಕೆಲಸ ಮಾಡುವ ತಾಂತ್ರಿಕ ಸಿಬ್ಬಂದಿಗೆ ಪ್ರತ್ಯೇಕ ವೇತನ ರಚನೆ ಇರಬೇಕು ಮತ್ತು ವಾರ್ಷಿಕ ಇಂಕ್ರಿಮೆಂಟ್ ಅನ್ನು ಶೇ. 5ಕ್ಕೆ ಹೆಚ್ಚಿಸಬೇಕು ಎನ್ನುವುದು ಸಂಘಟನೆಯ ಪ್ರಬಲ ವಾದವಾಗಿದೆ.
ನೌಕರರ ಒಕ್ಕೂಟಗಳ ಇತರ ಪ್ರಮುಖ ಬೇಡಿಕೆಗಳುಕೇವಲ ಫಿಟ್‌ಮೆಂಟ್ ಫ್ಯಾಕ್ಟರ್ ಮಾತ್ರವಲ್ಲದೆ, ವಿವಿಧ ನೌಕರರ ಒಕ್ಕೂಟಗಳು ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳ ಪಟ್ಟಿಯನ್ನೇ ಇಟ್ಟಿವೆ. ನ್ಯಾಷನಲ್ ಕೌನ್ಸಿಲ್-ಜೆಸಿಎಂ ಕನಿಷ್ಠ ಮೂಲ ವೇತನವನ್ನು 69,000 ರೂಪಾಯಿಗೆ ಹೆಚ್ಚಿಸಲು ಒತ್ತಾಯಿಸಿದ್ದರೆ, ಭಾರತೀಯ ಪ್ರತಿರಕ್ಷಾ ಮಜ್ದೂರ್ ಸಂಘವು ಒಂದು ಹೆಜ್ಜೆ ಮುಂದೆ ಹೋಗಿ 72,000 ರೂಪಾಯಿ ಕನಿಷ್ಠ ವೇತನ ಹಾಗೂ 4.0 ಫಿಟ್‌ಮೆಂಟ್ ಫ್ಯಾಕ್ಟರ್ ನೀಡುವಂತೆ ಆಗ್ರಹಿಸಿದೆ. ಹೊಸ ವೇತನ ಶ್ರೇಣಿ ಲೆಕ್ಕಾಚಾರ ಮಾಡುವ ಮುನ್ನವೇ ಸದ್ಯ ಇರುವ ಶೇಕಡ 50ರಷ್ಟು ತುಟ್ಟಿಭತ್ಯೆಯನ್ನು (DA) ಮೂಲ ವೇತನದೊಂದಿಗೆ ವಿಲೀನಗೊಳಿಸಬೇಕು. ಹಾಗೆ ಹೆಚ್ಚುತ್ತಿರುವ ಜೀವನ ವೆಚ್ಚ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ವೆಚ್ಚವನ್ನು ಸರಿದೂಗಿಸಲು 'ಕುಟುಂಬದ ಘಟಕ' (Family Unit) ಸೂತ್ರವನ್ನು 3 ರಿಂದ 5 ಕ್ಕೆ ಏರಿಸಬೇಕು. ಇದರೊಂದಿಗೆ ಹಳೇ ಪಿಂಚಣಿ ಯೋಜನೆ (OPS) ಮಾದರಿಯಲ್ಲೇ ಕನಿಷ್ಠ ಗ್ಯಾರಂಟಿ ಪಿಂಚಣಿ ಮತ್ತು ಡಿಎ ಆಧಾರಿತ ಪಿಂಚಣಿ ಸುರಕ್ಷತೆಯನ್ನು ಒದಗಿಸಬೇಕು.
ನೌಕರರ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದು ಅಷ್ಟು ಸುಲಭವಲ್ಲ. ಇಷ್ಟೊಂದು ಭಾರಿ ಪ್ರಮಾಣದ ವೇತನ ಪರಿಷ್ಕರಣೆಯು ಸರ್ಕಾರದ ಬೊಕ್ಕಸದ ಮೇಲೆ ತೀವ್ರ ಆರ್ಥಿಕ ಒತ್ತಡವನ್ನು ಉಂಟುಮಾಡಲಿದೆ. ನಿವೃತ್ತಿ ವೇತನದ ಹೊರೆ ಹೆಚ್ಚಾಗುವುದರ ಜೊತೆಗೆ ಮಾರುಕಟ್ಟೆಯಲ್ಲಿ ಹಣದುಬ್ಬರ (Inflation) ತಲೆದೋರುವ ಅಪಾಯವೂ ಇದೆ. ಅಲ್ಲದೆ, ಕೇಂದ್ರದ ನಿರ್ಧಾರದ ಬೆನ್ನಲ್ಲೇ ವಿವಿಧ ರಾಜ್ಯ ಸರ್ಕಾರಗಳೂ ಸಹ ತಮ್ಮ ನೌಕರರ ವೇತನ ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗುವುದರಿಂದ, ಇದು ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಕೇಂದ್ರ ಸರ್ಕಾರವು ಮಧ್ಯಮ ಮಾರ್ಗವನ್ನು ಕಂಡುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಪ್ರಸ್ತುತ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಆಯೋಗವು ದೇಶದಾದ್ಯಂತ ತೀವ್ರ ಸಮಾಲೋಚನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಭುವನೇಶ್ವರ, ಲಕ್ನೋ, ಹೈದರಾಬಾದ್, ಶ್ರೀನಗರ್ ಹಾಗೂ ಜಮ್ಮು-ಕಾಶ್ಮೀರ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸಭೆಗಳನ್ನು ನಡೆಸಲಿದೆ. ಈ ಆಯೋಗದ ಅಂತಿಮ ನಿರ್ಧಾರವು ದೇಶದ ಸುಮಾರು 1.1 ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಆರ್ಥಿಕ ಭವಿಷ್ಯವನ್ನು ನಿರ್ಧರಿಸಲಿದೆ.

