ಮುಂಬೈ: ಮದ್ಯಪ್ರಿಯರ ನೆಚ್ಚಿನ ರಮ್ ಬ್ರ್ಯಾಂಡ್ 'ಓಲ್ಡ್ ಮಾಂಕ್' (Old Monk) ಬಾಟಲಿಯ ಮೇಲಿರುವ ಲೇಬಲ್ ಶೀಘ್ರದಲ್ಲೇ ಬದಲಾಗಲಿದೆ. ಮುಂಬೈ ಹೈಕೋರ್ಟ್‌ನಲ್ಲಿ(Mumbai High Court) ನಡೆದ ವಿಚಾರಣೆ ವೇಳೆ, ಕಂಪನಿಯು ತನ್ನ ಬಾಟಲಿಗಳ ಮೇಲಿರುವ "7 ಇಯರ್ಸ್ ಓಲ್ಡ್ ಬ್ಲೆಂಡೆಡ್" (7 ವರ್ಷಗಳ ಹಳೆಯ ಬ್ಲೆಂಡೆಡ್) ಎಂಬ ಬರಹವನ್ನು ತೆಗೆದುಹಾಕಲು ಹಾಗೂ ಸೇರಿಸಲಾದ ಕೃತಕ ಸುವಾಸನೆಯ (Added Flavours) ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಲು ಒಪ್ಪಿಕೊಂಡಿದೆ.
ಹೈಕೋರ್ಟ್‌ನಿಂದ ಕಟು ಮಾತು: 'ಗ್ರಾಹಕರಿಗೆ ದಿಕ್ಕು ತಪ್ಪಿಸಬೇಡಿ' ಇದಷ್ಟೇ ಅಲ್ಲದೆ, ಬಾಟಲಿಯ ಮೇಲಿರುವ ಕೃತಕ ಸುವಾಸನೆಗಳ ಮಾಹಿತಿಯನ್ನು ಅತ್ಯಂತ ಸಣ್ಣ ಅಕ್ಷರಗಳಲ್ಲಿ ಮುದ್ರಿಸಿರುವುದಕ್ಕೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. "ನಾನು ಭೂತಕನ್ನಡಿ (Magnifying glass) ಬಳಸಿ ಹುಡುಕಿದರೂ ಆ ಮಾಹಿತಿ ಕಣ್ಣಿಗೆ ಬೀಳಲಿಲ್ಲ," ಎಂದು ನ್ಯಾಯಮೂರ್ತಿಗಳು ಲೇಬಲ್‌ನ ಸಣ್ಣ ಅಕ್ಷರಗಳ ವಿನ್ಯಾಸವನ್ನು ಟೀಕಿಸಿದರು. FSSAI ಅಕ್ಷೇಪಣೆ ಹಾಗೂ ಮಹಾರಾಷ್ಟ್ರದಲ್ಲಿ ಮಾರಾಟ ನಿಷೇಧ ಕಂಪನಿಯ ವಾದವೇನು? ಆದರೆ, ಈ ಹಂತದಲ್ಲಿ ಕಂಪನಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ಹೈಕೋರ್ಟ್, ಹೊಸ ಮಾದರಿಯ ಡಿಜಿಟಲ್ ಲೇಬಲ್ ಅನ್ನು ಪರಿಶೀಲನೆಗಾಗಿ ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 3ಕ್ಕೆ ಕಾಯ್ದಿರಿಸಲಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರವೀಂದ್ರ ವಿ. ಘುಗೆ ಅವರಿದ್ದ ಪೀಠವು, ಕಂಪನಿಯ ಲೇಬಲಿಂಗ್ ವಿಧಾನವನ್ನು ತೀವ್ರವಾಗಿ ಖಂಡಿಸಿದೆ. "7 ವರ್ಷ ಹಳೆಯದ್ದು ಎಂದರೆ 7 ವರ್ಷ ಹಳೆಯದೇ ಇರಬೇಕು. ಈ ರೀತಿಯ ಬರಹ ಗ್ರಾಹಕರನ್ನು ತಪ್ಪುದಾರಿಗೆ ಎಳೆಯುತ್ತದೆ," ಎಂದು ಕೋರ್ಟ್ ಗರಂ ಆಯಿತು.
ಓಲ್ಡ್ ಮಾಂಕ್ ತಯಾರಕ ಸಂಸ್ಥೆಯಾದ 'ಮೋಹನ್ ಮೀಕಿನ್' (Mohan Meakin) ವಿರುದ್ಧ FSSAI ಗಂಭೀರ ಆರೋಪ ಮಾಡಿದೆ. ಈ ರಮ್‌ನಲ್ಲಿ ಕೇವಲ ಶೇ. 2 ರಿಂದ 5 ರಷ್ಟು ಮಾತ್ರ 7 ವರ್ಷ ಹಳೆಯ ನೈಜ ರಮ್ ಬಳಸಿ, ಉಳಿದ ಶೇ. 95 ಕ್ಕೂ ಹೆಚ್ಚು ಭಾಗವನ್ನು ಸಾಮಾನ್ಯ ನೂಟ್ರಲ್ ಸ್ಪಿರಿಟ್‌ನಿಂದ ಭರ್ತಿ ಮಾಡಲಾಗಿದೆ. ನಂತರ ರಮ್‌ನ ನೈಜ ರುಚಿ ಮತ್ತು ಪರಿಮಳಕ್ಕಾಗಿ ಕೃತಕ ಸುವಾಸನೆಗಳನ್ನು ಸೇರಿಸಲಾಗುತ್ತಿದೆ ಎಂದು FSSAI ಕೋರ್ಟ್ ಗಮನಕ್ಕೆ ತಂದಿದೆ. ನಿಯಮಬಾಹಿರ ಲೇಬಲಿಂಗ್ ಕಾರಣದಿಂದಾಗಿ ಈಗಾಗಲೇ ಮಹಾರಾಷ್ಟ್ರದಲ್ಲಿ ಈ ರಮ್ ಮಾರಾಟವನ್ನು ತಡೆಯಲಾಗಿದೆ.
ತಯಾರಕ ಸಂಸ್ಥೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ನವ್ರೋಜ್ ಸೀರ್ವಾಯಿ, ಕಂಪನಿಯು ಪ್ರಸ್ತುತ ಇರುವ ಎಲ್ಲಾ ಬ್ಲೆಂಡೆಡ್ ಸ್ಪಿರಿಟ್ ನಿಯಮಗಳನ್ನು ಪಾಲಿಸುತ್ತಿದೆ ಮತ್ತು FSSAI ಅನುಮತಿಸಿದ ಸುವಾಸನೆಗಳನ್ನೇ ಬಳಸಿದೆ ಎಂದು ಸಮರ್ಥಿಸಿಕೊಂಡರು. ಅಲ್ಲದೆ ಮಾರುಕಟ್ಟೆಯಲ್ಲಿ ಇತರ ಬ್ರ್ಯಾಂಡ್‌ಗಳು ಇದೇ ವಿಧಾನ ಅನುಸರಿಸುತ್ತಿದ್ದರೂ ಓಲ್ಡ್ ಮಾಂಕ್ ಅನ್ನು ಮಾತ್ರ ಗುರಿಯಾಗಿಸಲಾಗಿದೆ ಎಂದು ವಾದಿಸಿದರು.

