Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: ಪರೀಕ್ಷಾ ಅಕ್ರಮ ತಡೆಗೆ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್: ಕಠಿಣ ನಿಯಮಾವಳಿಗಳ ಕರಡು ಪ್ರಕಟ

BIG NEWS: ಪರೀಕ್ಷಾ ಅಕ್ರಮ ತಡೆಗೆ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್: ಕಠಿಣ ನಿಯಮಾವಳಿಗಳ ಕರಡು ಪ್ರಕಟ

Navasamaja.com 2 weeks ago

ಬೆಂಗಳೂರು: ರಾಜ್ಯದಲ್ಲಿ ನಡೆಯುವ ವಿವಿಧ ಇಲಾಖೆಗಳ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (competitive exam) ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಅಕ್ರಮಗಳಿಗೆ ಸಂಪೂರ್ಣ ತಡೆ ಒಡ್ಡಲು ಸರ್ಕಾರ ಮುಂದಾಗಿದೆ.

'ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ನಿಯಮಗಳು, 2026'ರ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಹೊಸ ನಿಯಮಾವಳಿಗಳು:

ಅತ್ಯಂತ ಗೌಪ್ಯವಾಗಿ ಪ್ರಶ್ನೆಪತ್ರಿಕೆ ಸಿದ್ಧತೆ: ಪ್ರಶ್ನೆಪತ್ರಿಕೆ ತಯಾರಕರು, ಅನುವಾದಕರು ಹಾಗೂ ಪರಿಶೀಲಕರ ವಿವರಗಳನ್ನು ರಹಸ್ಯವಾಗಿಡಲಾಗುತ್ತದೆ. ಅನುಮೋದಿತ ಎನ್‌ಕ್ರಿಪ್ಟ್ ಮಾಡಿದ ತಾಂತ್ರಿಕ ವಿಧಾನಗಳ ಮೂಲಕವೇ ಪ್ರಶ್ನೆಪತ್ರಿಕೆಗಳನ್ನು ರವಾನಿಸಲಾಗುತ್ತದೆ.

ಡಿಜಿಟಲ್ ಲಾಗ್ ಮತ್ತು ಕರಡು ಪ್ರತಿಗಳ ನಾಶ: ಪ್ರಶ್ನೆಪತ್ರಿಕೆ ಸಿದ್ಧತೆ, ಪರಿಶೀಲನೆ, ಅನುವಾದ ಹಾಗೂ ಎನ್‌ಕ್ರಿಪ್ಶನ್‌ನ ಪ್ರತಿಯೊಂದು ಹಂತವನ್ನು ಗೌಪ್ಯ ನೋಂದಣಿ ಪುಸ್ತಕ ಅಥವಾ ಸುರಕ್ಷಿತ ಡಿಜಿಟಲ್ ಲಾಗ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಪ್ರಶ್ನೆಪತ್ರಿಕೆಯ ಯಾವುದೇ ಕರಡು ಪ್ರತಿ, ಸಾಫ್ಟ್ ಕಾಪಿ, ಅಥವಾ ಎಲೆಕ್ಟ್ರಾನಿಕ್ ದಾಖಲೆಗಳನ್ನು ಉಳಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪ್ರಶ್ನೆಪತ್ರಿಕೆಗಳ ಮುದ್ರಣವನ್ನು ಪರೀಕ್ಷಾ ಪ್ರಾಧಿಕಾರ ಅನುಮೋದಿಸಿದ ಭದ್ರತಾ ಮುದ್ರಣಾಲಯಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಮಾಹಿತಿ ಸೋರಿಕೆಯಾದರೆ ಮುದ್ರಣಾಲಯವೇ ತನಿಖಾ ಸಂಸ್ಥೆಗಳಿಗೆ ನೇರ ಉತ್ತರದಾಯಿಯಾಗಲಿದೆ. ಮುದ್ರಣ ಕೇಂದ್ರದ ಸಿಬ್ಬಂದಿ, ಬಳಸಿದ ಕಾಗದದ ಗುಣಮಟ್ಟ, ಮುದ್ರಿತ ಪ್ರತಿಗಳು ಹಾಗೂ ನಾಶಪಡಿಸಿದ ತಿರಸ್ಕೃತ ಪ್ರತಿಗಳ ನಿಖರ ಲೆಕ್ಕವನ್ನು ನಿರ್ವಹಿಸಬೇಕಾಗುತ್ತದೆ.

ಮುದ್ರಿತ ಪ್ರಶ್ನೆಪತ್ರಿಕೆಗಳು ಮತ್ತು ಗೌಪ್ಯ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯಾ ಜಿಲ್ಲಾ ಖಜಾನೆಯ ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗುತ್ತದೆ. ಈ ಸ್ಟ್ರಾಂಗ್ ರೂಂಗಳು ಡಬಲ್-ಲಾಕ್ (Double-lock) ವ್ಯವಸ್ಥೆ, ಸಿಸಿಟಿವಿ (CCTV) ಕಣ್ಣಾವಲು ಮತ್ತು ಅತ್ಯುನ್ನತ ದರ್ಜೆಯ ಭದ್ರತೆಯನ್ನು ಹೊಂದಿರಲಿವೆ.

ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಭದ್ರತೆ ಮತ್ತು ಮೇಲ್ವಿಚಾರಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗಳ ಹೆಗಲಿಗೆ ಏರಿಸಲಾಗಿದೆ. ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಂದೋಬಸ್ತ್ ಮತ್ತು ಅಗತ್ಯ ಭದ್ರತೆಯನ್ನು ಒದಗಿಸಲಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ವೀಡಿಯೋಗ್ರಫಿ ಮತ್ತು ತಾಂತ್ರಿಕ ತಂಡಗಳನ್ನು ಸಜ್ಜುಗೊಳಿಸಲಾಗುವುದು.

Dailyhunt
Disclaimer: This content has not been generated, created or edited by Dailyhunt. Publisher: Navasamaja