ಬೆಂಗಳೂರು : ನಗರದ (Bengaluru) ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೇಹಳ್ಳಿಯಲ್ಲಿ ಭಾರತದ ರಾಷ್ಟ್ರಪತಿಗಳ (President) ಹೆಸರಿನಲ್ಲಿ ನೋಂದಣಿಯಾಗಿದ್ದ ಹಾಗೂ ಕೇಂದ್ರ ಇಂಧನ ಸಚಿವಾಲಯಕ್ಕೆ ಸೇರಿದ ನೂರು ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೌಲ್ಯದ 32 ಗುಂಟೆ ಸರ್ಕಾರಿ ಜಾಗವನ್ನು (Government land) ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ (encroachment) ಎಂಬ ಗಂಭೀರ ದೂರನ್ನು ಬಿಬಿಎಂಪಿಯ ಮಾಜಿ ಪ್ರಮುಖ ನಾಯಕರಾದ ಎನ್.ಆರ್.
ರಮೇಶ್ ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾದ ಕೃಷ್ಣ ಭೈರೇಗೌಡ ಅವರ ನಿಕಟವರ್ತಿ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾಗಿರುವ ಕೆ.ಎಂ. ಚೇತನ್ ಮತ್ತು ಅವರ ತಂದೆ ಮಂಜುನಾಥ್ ಎಂಬುವವರು ತಮ್ಮ ಒಡೆತನದ ಚೇರ್ಮನ್ ಕ್ಲಬ್‌ಗಾಗಿ ಈ ಅಮೂಲ್ಯ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು, ಅಲ್ಲಿ ವಾಹನ ನಿಲ್ದಾಣ ಹಾಗೂ ಮುಕ್ತ ಭೋಜನಾಲಯವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಜಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಗಳಲ್ಲಿ ಸುದೀರ್ಘ ಕಾನೂನು ಹೋರಾಟ ನಡೆದಿದ್ದು, ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಸ್ವತ್ತು ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಎಂದು ಸ್ಪಷ್ಟ ತೀರ್ಪುಗಳನ್ನು ನೀಡಿವೆ. ತಪ್ಪು ಮಾಹಿತಿಗಳ ಆಧಾರದ ಮೇಲೆ ನಡೆದಿದ್ದ ಭೂಪರಿವರ್ತನೆಯನ್ನು ನ್ಯಾಯಾಂಗ ರದ್ದುಪಡಿಸಿದೆ. ಆದಾಗ್ಯೂ, ಈ ಒತ್ತುವರಿಯನ್ನು ತೆರವುಗೊಳಿಸುವಂತೆ ಕೇಂದ್ರದ ಅಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಇತ್ತೀಚೆಗೆ ಕೇಂದ್ರದ ಅಧಿಕಾರಿಗಳು ಸಚಿವರನ್ನು ಭೇಟಿಯಾಗಿ ಭೂಮಿಯ ಸರ್ವೆ ನಡೆಸಲು ಕೋರಿದಾಗ, ಸಚಿವರು ಅವರಿಗೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎನ್ನಲಾಗಿದೆ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಹೆಸರಿನಲ್ಲಿದ್ದ ಜಾಗಕ್ಕೇ ರಾಜಕೀಯ ಪ್ರಭಾವ ಬಳಸಿ ರಕ್ಷಣೆ ಇಲ್ಲದಂತೆ ಮಾಡಿರುವುದು ಆಘಾತಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಎಸಗಿದ ಆರೋಪಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರನ್ನು ನೀಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಭೂ ಹಗರಣದ ಸತ್ಯಾಸತ್ಯತೆ ಹೊರಬರಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಎನ್.ಆರ್ ರಮೇಶ್ ಒತ್ತಾಯಿಸಿದ್ದಾರೆ.

