ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ (Cabinet expansion) ಸ್ಥಾನ ಸಿಗದೇ ಇರುವುದಕ್ಕೆ ಆಡಳಿತಾರೂಢ ಕಾಂಗ್ರೆಸ್‌ನ (Congress) ಹಲವು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪೈಕಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ (Basanagouda Daddal) ಅವರು ತಮ್ಮ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದಾರೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಅವರು, ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ. ಹಿಂದುಳಿದ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಗೆ ಸಚಿವ ಸ್ಥಾನ ಸಿಗದಿರುವುದು ತಮಗೆ ತೀವ್ರ ಬೇಸರ ತಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನೀತಿ ಆಯೋಗವು ರಾಯಚೂರನ್ನು 'ಮಹತ್ವಾಕಾಂಕ್ಷಿ ಜಿಲ್ಲೆ' (Aspirational District) ಎಂದು ಗುರುತಿಸಿದ್ದರೂ ಸಹ ಸಂಪುಟದಲ್ಲಿ ಅವಕಾಶ ನೀಡದಿರುವುದು ತಮ್ಮ ರಾಜೀನಾಮೆ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಶಾಸಕರು ಹಾಗೂ ಅವರ ಬೆಂಬಲಿತ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿರುವ ಬೆನ್ನಲ್ಲೇ, ಬಸನಗೌಡ ದದ್ದಲ್ ಅವರ ಈ ರಾಜೀನಾಮೆ ನಿರ್ಧಾರವು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

