ಬೆಂಗಳೂರು:ರಾಜ್ಯ ಸರ್ಕಾರದ (karnataka Government) ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ (Guarantee scheme) ಒಂದಾದ 'ಶಕ್ತಿ ಯೋಜನೆ'ಯು (Shakti Scheme) ರಾಜ್ಯದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ.
ಸರ್ಕಾರಿ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಈ ಯೋಜನೆಯಿಂದಾಗಿ, ರಾಜ್ಯದ ಮುಜರಾಯಿ ಇಲಾಖೆಯ (Muzrai department) ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಸ್ಥಾನಗಳ ಆದಾಯದಲ್ಲಿ ಹಿಂದೆಂದೂ ಕಾಣದ ಭಾರಿ ಗಣನೀಯ ಹೆಚ್ಚಳ ಕಂಡುಬಂದಿದೆ. ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಮಹಿಳಾ ಭಕ್ತರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ದೇವಸ್ಥಾನಗಳ ಹುಂಡಿ ಕಾಣಿಕೆ ಹಾಗೂ ಸೇವೆಗಳ ಆದಾಯ ಗಗನಕ್ಕೇರಿದೆ. ವಿಶೇಷವಾಗಿ ಮಹಿಳೆಯರು ಧಾರ್ಮಿಕ ಕೇಂದ್ರಗಳಿಗೆ ಭೇಟಿನೀಡುತ್ತಿರುವುದರಿಂದ ರಾಜ್ಯದ ಅಗ್ರ 15 ಪ್ರಮುಖ ದೇವಸ್ಥಾನಗಳ ಆದಾಯದಲ್ಲಿ ಶೇಕಡಾ 8.6 ರಷ್ಟು ಬಂಪರ್ ಪ್ರಗತಿ ದಾಖಲಾಗಿದೆ. ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನ ಹಾಗೂ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕಾಣಿಕೆ ಸಂಗ್ರಹ ಭಾರಿ ಏರಿಕೆ ಕಂಡಿದೆ. ಕಳೆದ 2025-26ನೇ ಸಾಲಿನಲ್ಲಿ ಈ ದೇವಸ್ಥಾನಗಳ ಒಟ್ಟು ಆದಾಯ 613.5 ಕೋಟಿ ರೂಪಾಯಿ ಇತ್ತು. ಆದರೆ ಈ ಬಾರಿ ಅದು ಬರೋಬ್ಬರಿ 666.2 ಕೋಟಿ ರೂಪಾಯಾಗಿದೆ. ಈ ಮಹತ್ವದ ಬೆಳವಣಿಗೆಯ ಕುರಿತು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. "ಮೂರು ವರ್ಷಗಳ ಹಿಂದೆ ಆರಂಭವಾದ ಶಕ್ತಿ ಯೋಜನೆ ರಾಜ್ಯದ ಯಾತ್ರಾ ಪ್ರವಾಸೋದ್ಯಮಕ್ಕೆ ಭಾರಿ ದೊಡ್ಡ ಶಕ್ತಿ ನೀಡಿದೆ. ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸುವಾಗ ತಮ್ಮ ಕುಟುಂಬದ ಸದಸ್ಯರನ್ನೂ ಜೊತೆಯಲ್ಲಿ ಕರೆದುಕೊಂಡು ಬರುತ್ತಾರೆ. ಹೀಗಾಗಿ ಭಕ್ತರ ಆಗಮನ ದುಪ್ಪಟ್ಟಾಗಿದೆ. ದೇವಸ್ಥಾನಗಳಿಗೆ ಬರುವ ಈ ಆದಾಯವನ್ನು ಸಂಪೂರ್ಣವಾಗಿ ಅದೇ ದೇವಸ್ಥಾನದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಮುಖ ಪುಣ್ಯಕ್ಷೇತ್ರಗಳಿರುವ ಪಟ್ಟಣಗಳು ಮತ್ತು ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಬಸ್ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿಶೇಷ ಬಸ್‌ಗಳ ವ್ಯವಸ್ಥೆ ಸದ್ಯ ಕೆಎಸ್‌ಆರ್‌ಟಿಸಿ ಬಳಿ ಇರುವ ಒಟ್ಟು 8,900 ಬಸ್‌ಗಳ ಪೈಕಿ 7,000ಕ್ಕೂ ಹೆಚ್ಚು ಸಾಮಾನ್ಯ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಮುಕ್ತ ಅವಕಾಶವಿದೆ. ಧಾರ್ಮಿಕ ಕ್ಷೇತ್ರಗಳ ಮಾರ್ಗಗಳಲ್ಲಿ ಈ ಬಸ್‌ಗಳ ಸಂಚಾರವನ್ನು ಹೆಚ್ಚಿಸಲಾಗಿದ್ದು, ಹಬ್ಬ ಹರಿದಿನಗಳು ಹಾಗೂ ಶಾಲಾ ರಜಾದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

