ಬೆಂಗಳೂರು : ರಾಜ್ಯ ರಾಜಕಾರಾಣಲ್ಲಿ (Politics ) ಸಾಕಷ್ಟು ಬದಲಾವಣೆ ಕೇಳಿಬರುತ್ತಿರೋ ಬೆನ್ನಲ್ಲೇ ಇದೀಗ ಅಧಿಕಾರಿಗಳ ಟ್ರಾನ್ಸ್ಫರ್ (Transfer ) ದೊಡ್ಡ ಸದ್ದು ಮಾಡ್ತಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 27 ತಹಶೀಲ್ದಾರ್ ಮಟ್ಟದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ಪ್ರಮುಖ ಆಡಳಿತಾತ್ಮಕ ಸರ್ಜರಿ ನಡೆದಿದ್ದು, ದೀರ್ಘಕಾಲ ಒಂದೇ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಹಾಗೂ ಕಾಯುವಿಕೆಯಲ್ಲಿದ್ದ ಅಧಿಕಾರಿಗಳಿಗೆ ಹೊಸ ಸ್ಥಳಗಳನ್ನು ನೀಡಲಾಗಿದೆ.
ಉತ್ತರ ಕನ್ನಡ, ಹಾವೇರಿ ಜಿಲ್ಲೆಯ ಹಾನಗಲ್ ಸೇರಿದಂತೆ ಮೈಸೂರು ಹಾಗೂ ಬೆಂಗಳೂರು ಭಾಗದ ಪ್ರಮುಖ ತಾಲ್ಲೂಕುಗಳ ತಹಶೀಲ್ದಾರ್‌ಗಳು ಈ ವರ್ಗಾವಣೆ ಪಟ್ಟಿಯಲ್ಲಿದ್ದಾರೆ.
ವರ್ಗಾವಣೆಗೊಂಡಿರುವ ಎಲ್ಲಾ ಅಧಿಕಾರಿಗಳು ಯಾವುದೇ ವಿಳಂಬ ಮಾಡದೆ, ತಮಗೆ ನಿಯೋಜಿಸಲಾದ ಹೊಸ ಹುದ್ದೆ ಹಾಗೂ ಸ್ಥಳಗಳಲ್ಲಿ ತಕ್ಷಣವೇ ಅಧಿಕಾರ ವಹಿಸಿಕೊಳ್ಳಬೇಕು ಮತ್ತು ಈ ಕುರಿತು ಕಡ್ಡಾಯವಾಗಿ ವರದಿ ಸಲ್ಲಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರದ ಈ ದಿಢೀರ್ ಆದೇಶವು ಕಂದಾಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

