ಬೆಂಗಳೂರು : ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ (BAnbukumar )ಅವರು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಎಲ್‌ಓಗಳಿಗೆ (BLO) ಕಠಿಣ ಸೂಚನೆ ನೀಡಿದ್ದಾರೆ.
ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ನಿಗದಿತ ಅರ್ಜಿ ಫಾರಂಗಳನ್ನು ತಲುಪಿಸಬೇಕು ಎಂದು ಅವರು ಆದೇಶಿಸಿದ್ದಾರೆ.
ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷರಹಿತವಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಬಿಎಲ್‌ಓಗಳು ಮನೆ ಮನೆಗೆ ಹೋಗದೆ, ಒಂದೇ ಕಡೆ ಕುಳಿತು ಉದಾಸೀನತೆಯಿಂದ ಕೆಲಸ ನಿರ್ವಹಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಅಭಿಯಾನದಲ್ಲಿ ಹೊಸದಾಗಿ ಮತದಾನದ ಹಕ್ಕು ಪಡೆಯುವವರಿಗಾಗಿ 'ಫಾರಂ 6' ಹಾಗೂ ಹೆಸರು ಅಥವಾ ವಿಳಾಸ ತಿದ್ದುಪಡಿಗಳಿಗಾಗಿ 'ಫಾರಂ 8' ಅನ್ನು ಅಧಿಕಾರಿಗಳೇ ಮನೆ ಬಾಗಿಲಿಗೆ ತಂದು ನೀಡಲಿದ್ದಾರೆ. ಸಾರ್ವಜನಿಕರು ತಮ್ಮ ವೋಟರ್ ಐಡಿ ಮತ್ತು ಆಧಾರ್ ವಿವರಗಳನ್ನು ನೀಡಿ ಸಹಕರಿಸಬೇಕಿದೆ. ರಾಜ್ಯಾದ್ಯಂತ ಆರಂಭವಾಗಿರುವ ಈ ಮನೆ ಮನೆ ಸಮೀಕ್ಷೆ ಕಾರ್ಯವು ಜುಲೈ ಅಂತ್ಯದವರೆಗೆ ನಡೆಯಲಿದೆ. ಬಳಿಕ ಆಗಸ್ಟ್‌ನಲ್ಲಿ ಕರಡು ಪಟ್ಟಿ ಪ್ರಕಟಿಸಿ, ಅಕ್ಟೋಬರ್ ತಿಂಗಳಿನಲ್ಲಿ ಅಂತಿಮ ಪರಿಷ್ಕೃತ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಚುನಾವಣಾ ಆಯೋಗವು ನಿರ್ಧರಿಸಿದೆ.

