ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಧಾರವಾಡ (Dharwad) ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ (Big News) ಅಂತಿಮ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 9ಕ್ಕೆ ಕಾಯ್ದಿರಿಸಿದೆ.
ಕಳೆದ ಆರು ತಿಂಗಳಿನಿಂದ ಸುದೀರ್ಘವಾಗಿ ನಡೆದ ವಿಚಾರಣೆ ಹಾಗೂ ವಾದ-ಪ್ರತಿವಾದಗಳು ಇಂದು ಅಂತ್ಯಗೊಂಡಿದ್ದು, ನ್ಯಾಯಾಧೀಶರು ತೀರ್ಪಿನ ದಿನಾಂಕವನ್ನು ಘೋಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ ಕೊನೆಯ ವಾರದಲ್ಲಿ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ಲಿಖಿತ ವಾದ ಸಲ್ಲಿಕೆ ಮಾಡಲು ನ್ಯಾಯಾಲಯ ಅವಕಾಶ ನೀಡಿತ್ತು. ಇಂದು (ಏಪ್ರಿಲ್ 2) ಎಲ್ಲಾ ಸಲ್ಲಿಕೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಏಪ್ರಿಲ್ 9ರಂದು ತನ್ನ ಅಂತಿಮ ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿದೆ. ತೀರ್ಪು ಪ್ರಕಟವಾಗುವ ದಿನದಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ ಒಟ್ಟು 21 ಮಂದಿ ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯದ ಮುಂದೆ ಹಾಜರಿರಬೇಕು ಎಂದು ಸೂಚಿಸಲಾಗಿದೆ. ಪ್ರಕರಣದ ಹಿನ್ನೆಲೆ: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ 2016ರ ಜೂನ್ 16ರಂದು ಧಾರವಾಡದಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಕೊಲೆಯ ಹಿಂದೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ಅಪರಾಧಿಕ ಒಳಸಂಚು ಇದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ 2019ರಲ್ಲಿ ರಾಜ್ಯ ಸರ್ಕಾರವು ತನಿಖೆಯನ್ನು ಸಿಬಿಐಗೆ (CBI) ವರ್ಗಾವಣೆ ಮಾಡಿತ್ತು. ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಬಂಧನದ ನಂತರ 2021ರಲ್ಲಿ ಸುಪ್ರೀಂಕೋರ್ಟ್‌ನಿಂದ ವಿನಯ್ ಕುಲಕರ್ಣಿ ಜಾಮೀನು ಪಡೆದಿದ್ದರು. ಆದರೆ, ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಅವರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಇದರಿಂದಾಗಿ ಅವರು ಕಳೆದ ಆರು ತಿಂಗಳಿನಿಂದ ಜೈಲುವಾಸ ಅನುಭವಿಸಬೇಕಾಯಿತು. ಇತ್ತೀಚೆಗೆ ಅಂದರೆ ಫೆಬ್ರವರಿ 27ರಂದು ಸುಪ್ರೀಂಕೋರ್ಟ್ ಅವರಿಗೆ ಮತ್ತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈಗ ಹತ್ತು ವರ್ಷಗಳ ಹಳೆಯ ಹತ್ಯೆ ಪ್ರಕರಣವು ಅಂತಿಮ ಘಟ್ಟಕ್ಕೆ ತಲುಪಿದ್ದು, ಏಪ್ರಿಲ್ 9ರಂದು ನ್ಯಾಯಾಲಯ ನೀಡುವ ತೀರ್ಪು ವಿನಯ್ ಕುಲಕರ್ಣಿ ಅವರ ರಾಜಕೀಯ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

