ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ದಿನದಿಂದ ದಿನಕ್ಕೆ ಆಂತರಿಕ ಭಿನ್ನಮತ ಸ್ಫೋಟಗೊಳ್ಳುತ್ತಲೇ ಇದ್ದು, ಪಕ್ಷವು ಸಂಪೂರ್ಣವಾಗಿ ಒಡೆದ ಮನೆಯಾಗಿ ಮಾರ್ಪಟ್ಟಿದೆ. ಮನೆಯೊಂದು ಮೂರು ಬಾಗಿಲು ಎಂಬ ಗಾದೆ ಮಾತು ಮೀರಿ, ಸದ್ಯ ನಾಲ್ಕೈದು ಬಣಗಳಾಗಿ ಸೀಳಾಗಿರುವ ಕಮಲ ಪಡೆಯಲ್ಲಿ ಒಬ್ಬ ನಾಯಕನನ್ನು ಕಂಡರೆ ಮತ್ತೊಬ್ಬರಿಗೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗೊಂದಲಗಳನ್ನು ಬಗೆಹರಿಸಬೇಕಾದ ಪಕ್ಷದ ವರಿಷ್ಠರು (ಹೈಕಮಾಂಡ್) ಮಾತ್ರ ನಿಗೂಢ ಮೌನಕ್ಕೆ ಶರಣಾಗಿದ್ದು, ಇದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಲ್ಲಿ ಹತಾಶೆ ಮೂಡಿಸಿದೆ. ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವಾಗಲೇ ವಿರೋಧ ಪಕ್ಷವಾಗಿ ಅಬ್ಬರಿಸಬೇಕಿದ್ದ ಬಿಜೆಪಿ, ಆಂತರಿಕ ಜಗಳಗಳಿಂದಾಗಿ ಇದ್ದೂ ಇಲ್ಲದಂತಾಗಿದೆ. ಸದ್ಯ ಪಕ್ಷದಲ್ಲಿ ಬಿ.ವೈ.ವಿಜಯೇಂದ್ರ ಬಣ, ಆರ್.ಅಶೋಕ್ ಬಣ, ಹೈಕಮಾಂಡ್ ನಿಷ್ಠಾವಂತರ ಬಣ, ರೆಬೆಲ್ಸ್ ಬಣ ಹಾಗೂ ರಾಜಕೀಯದಿಂದ ಬೇಸತ್ತು ತಟಸ್ಥವಾಗಿರುವ ಮತ್ತೊಂದು ಹತಾಶ ಬಣಗಳು ಸೃಷ್ಟಿಯಾಗಿವೆ. ಬಿ.ವೈ ವಿಜಯೇಂದ್ರ v/s ರೆಬೆಲ್ಸ್ ಬಿಕ್ಕಟ್ಟು ಡಿ.ವಿ ಸದಾನಂದ ಗೌಡ v/s ಎಸ್.ಆರ್ ವಿಶ್ವನಾಥ್ ಸಮರ ಡಾ. ಕೆ. ಸುಧಾಕರ್ v/s ಎಸ್.ಆರ್ ವಿಶ್ವನಾಥ್ ಯತ್ನಾಳ್ ಉಚ್ಚಾಟನೆಗೊಂಡರೂ ಮುಗಿಯದ ಇರುಸುಮುರುಸು ಹೈಕಮಾಂಡ್ ಮೌನ, ಪರಿಹಾರ ಯಾವಾಗ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಅಸಮಾಧಾನ ಸದ್ಯದ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಹೊಗೆಯಾಡುತ್ತಿದೆ. ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಬೇಡಿಕೆ ತೀವ್ರಗೊಂಡಿದೆ. ಇತ್ತೀಚೆಗಷ್ಟೇ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಪಕ್ಷದ ಆಂತರಿಕ ಬೇಗುದಿಯನ್ನು ಬೀದಿಗೆ ತಂದಿದೆ. ವಿಜಯೇಂದ್ರ ಅವರಿಗೆ ದೆಹಲಿಯ ಕೆಲ ಪ್ರಭಾವಿ ನಾಯಕರ ಬೆಂಬಲ ಇರುವುದರಿಂದ ಅವರ ಸ್ಥಾನ ಭದ್ರವಾಗಿದ್ದರೂ, ಅವರನ್ನು ವಿರೋಧಿಸುತ್ತಿರುವ ರೆಬೆಲ್ಸ್ ಪಡೆ ಕೂಡ ಅಷ್ಟೇ ಪ್ರಬಲವಾಗಿ ಸವಾಲೊಡ್ಡುತ್ತಿದೆ.
ಇನ್ನೊಂದೆಡೆ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಂಪೇಗೌಡ ಜಯಂತಿ ಆಚರಣೆಯ ವಿಷಯವಾಗಿ ಆರಂಭವಾದ ಈ ಜಗಳ, ಇದೀಗ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ವಿಶ್ವನಾಥ್ ವಿರುದ್ಧ ಡಿವಿಎಸ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ವಿಶ್ವನಾಥ್ ಅವರು ಡಿವಿಎಸ್‌ಗೆ ಲೀಗಲ್ ನೋಟಿಸ್ ಕಳುಹಿಸಿ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಇಬ್ಬರ ನಡುವಿನ ಗಲಾಟೆಯನ್ನು ತಣ್ಣಗಾಗಿಸಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಡೆಸಿದ ಸಂಧಾನ ಯತ್ನಗಳೂ ಸಫಲವಾದಂತೆ ಕಾಣುತ್ತಿಲ್ಲ.
ಇದೇ ವೇಳೆ ಎಸ್.ಆರ್.ವಿಶ್ವನಾಥ್ ಅವರು ಸಂಸದ ಡಾ. ಕೆ.ಸುಧಾಕರ್ ಜೊತೆಗೂ ಬಹಿರಂಗವಾಗಿ ವಾಕ್ಸಮರಕ್ಕಿಳಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯಲಹಂಕ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸುಧಾಕರ್ ಎಚ್ಚರಿಕೆ ನೀಡಿದ್ದರೆ, ಸುಧಾಕರ್ ಅವರು ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ನಿಲ್ಲುತ್ತಾರೋ ಅಥವಾ ಸಂಸದರಾಗಿ ನಿಲ್ಲುತ್ತಾರೋ ಮೊದಲು ಸ್ಪಷ್ಟಪಡಿಸಲಿ ಎಂದು ವಿಶ್ವನಾಥ್ ಸವಾಲು ಎಸೆದಿದ್ದಾರೆ. ಈ ಬಹಿರಂಗ ಸಂಘರ್ಷ ಪಕ್ಷದ ವರ್ಚಸ್ಸಿಗೆ ಭಾರಿ ಧಕ್ಕೆ ತರುತ್ತಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದರೂ, ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಅವರ ವಾಗ್ದಾಳಿ ನಿಂತಿಲ್ಲ. ಯತ್ನಾಳ್ ಹೇಳಿಕೆಗಳಿಗೆ ಬಿಜೆಪಿಯೊಳಗಿನ ರೆಬೆಲ್ ಟೀಮ್ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ಪ್ರಸ್ತುತ ನಾಯಕತ್ವಕ್ಕೆ ಪ್ರತಿದಿನ ತಲೆನೋವಾಗಿ ಪರಿಣಮಿಸಿದೆ.
ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲಾ ರಾಮಾಯಣ ನಡೆಯುತ್ತಿದ್ದರೂ ಕೇಂದ್ರ ನಾಯಕತ್ವ ಹಾಗೂ ರಾಷ್ಟ್ರೀಯ ಶಿಸ್ತು ಸಮಿತಿ ಮಾತ್ರ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ನಿಂತ ನೀರಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಾಯಕರು ಕೆಲವೊಂದು ಆಂತರಿಕ ಸೂಚನೆಗಳನ್ನು ನೀಡಿದ್ದರೂ, ಅವುಗಳನ್ನು ಪಾಲಿಸುವ ಮನಸ್ಥಿತಿಯಲ್ಲಿ ರಾಜ್ಯ ನಾಯಕರಿಲ್ಲ. ಹೈಕಮಾಂಡ್‌ನ ಈ ನಿರಾಸಕ್ತಿ ಹೀಗೆಯೇ ಮುಂದುವರಿದರೆ ಬಿಜೆಪಿಯ ಒಳಗಿನ ಜಗಳಕ್ಕೆ ಮುಕ್ತಿ ಸಿಗುವುದು ಯಾವಾಗ ಮತ್ತು ಇದಕ್ಕೆ ಶಾಶ್ವತ ಪರಿಹಾರ ಎಂದು ಎಂಬ ಯಕ್ಷಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.

