Dailyhunt Logo
  • Light mode
    Follow system
    Dark mode
    • Play Story
    • App Story
BOLLYWOOD: 25 ವರ್ಷಗಳ ನಂತರ ಮತ್ತೆ ರಿಲೀಸ್‌ ಆಗ್ತಿದೆ ಬಾಲಿವುಡ್‌ ಐಕಾನಿಕ್‌ ಸಿನಿಮಾ

BOLLYWOOD: 25 ವರ್ಷಗಳ ನಂತರ ಮತ್ತೆ ರಿಲೀಸ್‌ ಆಗ್ತಿದೆ ಬಾಲಿವುಡ್‌ ಐಕಾನಿಕ್‌ ಸಿನಿಮಾ

Navasamaja.com 4 months ago

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಮ್ಮೆಯ ಮತ್ತು ಪ್ರತಿಯೊಬ್ಬ ಸಿನಿರಸಿಕನ ಹೃದಯಕ್ಕೆ ಹತ್ತಿರವಾಗಿರುವ ಆಮೀರ್ ಖಾನ್ ನಟನೆಯ 'ಲಗಾನ್' (Lagaan) ಸಿನಿಮಾ (Bollywood) ಮತ್ತೊಮ್ಮೆ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

25 ವರ್ಷ ಪೂರೈಸಿದ ಸಿನಿಮಾ
'ಆಮೀರ್ ಖಾನ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ಮೂಡಿಬಂದಿದ್ದ ಈ ದೃಶ್ಯ ವೈಭವ, ಬಿಡುಗಡೆಯಾಗಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜೂನ್ 12, 13 ಮತ್ತು 14 ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ (Re-release) ಆಗುತ್ತಿದೆ. ಈ ವಿಶೇಷ ಸಂದರ್ಭಕ್ಕಾಗಿ ಚಿತ್ರತಂಡ ಭರ್ಜರಿ ಟ್ರೈಲರ್ ಒಂದನ್ನು ಬಿಡುಗಡೆ ಮಾಡಿದ್ದು, ಬೆಳ್ಳಿಪರದೆ ಮೇಲೆ ಈ ಸಿನಿಮಾವನ್ನ ಮರಳಿ ಕಣ್ತುಂಬಿಕೊಳ್ಳಲು ಇಡೀ ದೇಶದ ಪ್ರೇಕ್ಷಕರು ಕಾತರರಾಗಿದ್ದಾರೆ.

ಹೊಸ ಟ್ರೈಲರ್‌ ರಿಲೀಸ್
ಈಗ ಹೊರಬಂದಿರುವ ಲಗಾನ್ ಚಿತ್ರದ ಹೊಸ ಟ್ರೈಲರ್ ಪ್ರೇಕ್ಷಕರನ್ನು 25 ವರ್ಷಗಳ ಹಿಂದಿನ ನೆನಪುಗಳ ಜಗತ್ತಿಗೆ ಕರೆದೊಯ್ಯುತ್ತದೆ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಭಾರತ, ಗ್ರಾಮೀಣ ಸೊಗಡು, ಭಾರತೀಯರ ಮುಗ್ಧತೆ ಹಾಗೂ ಅಂದಿನ ಕಠಿಣ ಬದುಕನ್ನು ಅತ್ಯಂತ ಆಕರ್ಷಕವಾಗಿ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಪ್ರೀತಿ, ಒಗ್ಗಟ್ಟು, ಪ್ರೇರಣೆ ಹಾಗೂ ಕೊನೆಯಲ್ಲಿ ಸಿಗುವ ಗೆಲುವಿನ ರೋಮಾಂಚನವನ್ನು ನೆನಪಿಸುವ ದೃಶ್ಯಗಳು ನೋಡುಗರಲ್ಲಿ ರೋಮಾಂಚನ ಉಂಟುಮಾಡುತ್ತಿವೆ. ಎಆರ್ ರೆಹಮಾನ್ ಅವರ ಮೈ ರೋಮ ನಿಲ್ಲಿಸುವ ಹಿನ್ನೆಲೆ ಸಂಗೀತ ಮತ್ತು ಸುಮಧುರ ಹಾಡುಗಳು ಈ ಟ್ರೈಲರ್‌ನ ಖದರ್ ಹೆಚ್ಚಿಸಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡುವ ಕ್ರೇಜ್ ಅನ್ನು ದುಪ್ಪಟ್ಟು ಮಾಡಿದೆ.

2001 ರಲ್ಲಿ ತೆರೆಕಂಡಿದ್ದ 'ಲಗಾನ್: ಒನ್ಸ್ ಅಪಾನ್ ಎ ಟೈಮ್ ಇನ್ ಇಂಡಿಯಾ' ಚಿತ್ರವನ್ನು ಪ್ರಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದರು. ಆಮೀರ್ ಖಾನ್ ನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಗ್ರೇಸಿ ಸಿಂಗ್, ಬ್ರಿಟಿಷ್ ನಟರಾದ ರಾಚೆಲ್ ಶೆಲ್ಲಿ ಮತ್ತು ಪಾಲ್ ಬ್ಲ್ಯಾಕ್‌ಥಾರ್ನ್, ರಘುಬೀರ್ ಯಾದವ್, ಪ್ರದೀಪ್ ರಾವತ್, ಎ. ಕೆ. ಹಂಗಲ್ ಸೇರಿದಂತೆ ಭಾರತೀಯ ಚಿತ್ರರಂಗದ ದೊಡ್ಡ ತಾರಾಗಣವೇ ಇತ್ತು. ಚಿತ್ರದಲ್ಲಿನ 'ಘನನ್ ಘನನ್', 'ಮಿತ್ವಾ', 'ರಾಧಾ ಕೈಸೆ ನಾ ಜಲೇ' ಮತ್ತು 'ಓ ರೇ ಚೋರಿ' ಹಾಡುಗಳು ಇಂದಿಗೂ ಪ್ರೇಕ್ಷಕರ ನೆಚ್ಚಿನ ಗೀತೆಗಳಾಗಿವೆ.

ಸಿನಿಮಾವು 1893ರ ಬ್ರಿಟಿಷ್ ಆಡಳಿತದ ಅವಧಿಯದ್ದಾಗಿದೆ. ಭೀಕರ ಬರಗಾಲ ಮತ್ತು ಬ್ರಿಟಿಷರ ಅತಿಯಾದ ತೆರಿಗೆಯ (ಲಗಾನ್) ಹೊರೆಯಿಂದ ತತ್ತರಿಸಿದ್ದ ಮಧ್ಯ ಭಾರತದ ಪುಟ್ಟ ಹಳ್ಳಿಯೊಂದರ ಜನರಿಗೆ, ಅಲ್ಲಿನ ಅಹಂಕಾರಿ ಬ್ರಿಟಿಷ್ ಅಧಿಕಾರಿ ಕ್ರಿಕೆಟ್ ಪಂದ್ಯದ ಸವಾಲು ಹಾಕುತ್ತಾನೆ. ತಮಗೆ ಕಲ್ಪನೆಯೇ ಇಲ್ಲದ ಕ್ರಿಕೆಟ್ ಆಟವನ್ನು ಕಲಿತು, ಬ್ರಿಟಿಷರ ವಿರುದ್ಧ ಗೆದ್ದು ತಮ್ಮ ಹಳ್ಳಿಯ ಮರ್ಯಾದೆ ಮತ್ತು ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಗ್ರಾಮೀಣ ಜನರು ನಡೆಸುವ ಹೋರಾಟವೇ ಈ ಚಿತ್ರದ ಜೀವಾಳವಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದ 'ಲಗಾನ್' ಸಿನಿಮಾ, ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ವಿದೇಶಿ ಭಾಷಾ ಚಿತ್ರ' ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದ ಭಾರತದ ಮೂರನೇ ಹಾಗೂ ಕೊನೆಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಭಾರತದ 49ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಅತ್ಯುತ್ತಮ ಜನಪ್ರಿಯ ಚಿತ್ರ' ಸೇರಿದಂತೆ ಒಟ್ಟು ಎಂಟು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಈ ಮಾಸ್ಟರ್‌ಪೀಸ್ ಚಿತ್ರವನ್ನು ಜೂನ್ 12 ರಿಂದ ಮೂರು ದಿನಗಳ ಕಾಲ ಥಿಯೇಟರ್‌ಗಳಲ್ಲಿ ನೋಡುವುದೇ ಒಂದು ಹಬ್ಬದೂಟವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja