ಮುಂಬೈ : ಚಿತ್ರರಂಗದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ನಡೆದುಕೊಂಡು ಬಂದಿರುವ ಲಿಂಗ ತಾರತಮ್ಯದ (Gender Bias) ಕುರಿತು ಬಾಲಿವುಡ್‌ನ (Bollywood )ಖ್ಯಾತ ನಟಿ ಕೃತಿ ಸನನ್ (Kriti Sanon) ಧೈರ್ಯವಾಗಿ ಧ್ವನಿ ಎತ್ತಿದ್ದಾರೆ. ಸಿನಿಮಾದ ಚಿತ್ರೀಕರಣದ ಸೆಟ್‌ಗಳಲ್ಲಿ ಮಹಿಳಾ ಕಲಾವಿದರನ್ನು ಹೇಗೆ ಕೀಳಾಗಿ ಕಾಣಲಾಗುತ್ತದೆ ಮತ್ತು ನಾಯಕ ನಟರಿಗೆ ಹೋಲಿಸಿದರೆ ನಟಿಯರನ್ನು ಹೇಗೆ ಭಿನ್ನವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ.
ಪ್ರಸಿದ್ಧ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರ ಟಾಕ್ ಶೋನಲ್ಲಿ ಭಾಗವಹಿಸಿದ್ದ ಕೃತಿ, ತಾವು ಮಾಡೆಲಿಂಗ್, ಇಂಜಿನಿಯರಿಂಗ್ ಕಾಲೇಜು ಮತ್ತು ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಭಾಗವಾಗಿದ್ದರೂ, ಬಾಲಿವುಡ್‌ನಲ್ಲೇ ಅತ್ಯಂತ ಹೆಚ್ಚು ಸವಾಲುಗಳನ್ನು ಹಾಗೂ ತಾರತಮ್ಯವನ್ನು ಎದುರಿಸಬೇಕಾಗಿ ಬಂತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಪ್ರಶ್ನೆ ಕೇಳಿದರೆ ಕಿರಿಕಿರಿ ಅಂತಾರೆ! ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು ಐಷಾರಾಮಿ ಕ್ಯಾರವಾನ್ ಹೀರೋಗೆ, ಸಾಮಾನ್ಯ ರೂಮ್ ನಟಿಗೆ! ಸಹಾಯಕ ನಿರ್ದೇಶಕರಿಗೆ ಹೀರೋ ಕಂಡರೆ ಭಯ ಕಾಲ ಬದಲಾಗುತ್ತಿದೆ, ಮಹಿಳಾ ಪ್ರಧಾನ ಚಿತ್ರ ಬರುತ್ತಿವೆ!
ಚಿತ್ರೀಕರಣದ ಸಮಯದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣ ಬೇರೆಯಾಗಿರುತ್ತದೆ ಎಂದು ಕೃತಿ ವಿವರಿಸಿದ್ದಾರೆ. ನನಗೆ ಚಿತ್ರಕಥೆ ಹಾಗೂ ನನ್ನ ಪಾತ್ರಗಳ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸುವ ಅಭ್ಯಾಸ ಮೊದಲಿನಿಂದಲೂ ಇದೆ. ಆದರೆ, ಒಬ್ಬ ನಟಿ ಪ್ರಶ್ನೆ ಕೇಳಿದರೆ ಸೆಟ್‌ನಲ್ಲಿರುವವರು ಇವಳು ಎಷ್ಟು ಪ್ರಶ್ನೆ ಕೇಳುತ್ತಾಳೆ, ಇನ್ನು ಇವಳ 50 ಪ್ರಶ್ನೆಗಳು ಶುರುವಾಗುತ್ತವೆ ಎಂದು ಹಿಂದೆ ಆಡಿಕೊಳ್ಳುತ್ತಾರೆ. ಅದೇ ಪ್ರಶ್ನೆಯನ್ನು ಒಬ್ಬ ನಟ ಕೇಳಿದರೆ, ಅವನಿಗೆ ಸಿನಿಮಾದಲ್ಲಿ ತುಂಬಾ ಆಸಕ್ತಿ ಇದೆ, ಸಿನಿಮಾ ಚೆನ್ನಾಗಿ ಬರಲಿ ಎಂದು ಯೋಚಿಸುತ್ತಿದ್ದಾನೆ ಎಂದು ಹೊಗಳುತ್ತಾರೆ, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮಗೆ ಎದುರಾದ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಕೃತಿ, ನನಗೂ ಇಂತಹ ತಾರತಮ್ಯದ ಅನುಭವವಾಗಿದೆ. ನಾನು ಶೂಟಿಂಗ್ ವೇಳೆ ಪಾತ್ರದ ಬಗ್ಗೆ ಪ್ರಶ್ನೆ ಕೇಳಿದಾಗ ನಿರ್ದೇಶಕರು ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಹೇಳಿದಷ್ಟು ಸುಮ್ಮನೆ ನಟಿಸು ಎಂದು ಸಲೀಸಾಗಿ ಹೇಳಿ ಮುಗಿಸುತ್ತಿದ್ದರು. ಆದರೆ ಅದೇ ಪ್ರಶ್ನೆಯನ್ನು ನನ್ನ ಸಹನಟ (ಹೀರೋ) ಕೇಳಿದಾಗ ಓಕೆ, ನೀನು ಹೇಳುವುದು ಸರಿ ಇದೆ, ಹಾಗೇ ಮಾಡೋಣ ಎಂದು ತಕ್ಷಣ ಒಪ್ಪಿಕೊಳ್ಳುತ್ತಿದ್ದರು, ಎಂದು ಚಿತ್ರರಂಗದ ದ್ವಂದ್ವ ನೀತಿಯ ಬಗ್ಗೆ ಹೇಳಿದ್ದಾರೆ.
ಚಿತ್ರೀಕರಣದ ವೇಳೆ ಸಿಗುವ ಸೌಲಭ್ಯಗಳಲ್ಲೂ ನಟ-ನಟಿಯರ ನಡುವೆ ಆಕಾಶ-ಭೂಮಿಯಷ್ಟು ವ್ಯತ್ಯಾಸ ಇರುತ್ತದೆ ಎಂದು ಕೃತಿ ಸನೋನ್ ಆರೋಪ ಮಾಡಿದ್ದಾರೆ. ಹಲವು ಬಾರಿ ನಾಯಕ ನಟರಿಗೆ ನೀಡಲಾಗುವ ಕಾರು ಅಥವಾ ಕ್ಯಾರವಾನ್ ರೂಮ್‌ಗಳು ತುಂಬಾ ಬೃಹತ್ ಆಗಿ, ಐಷಾರಾಮಿಯಾಗಿರುತ್ತವೆ. ಆದರೆ ನಟಿಯರಿಗೆ ತೀರಾ ಸಾಮಾನ್ಯವಾದ ಸಣ್ಣ ರೂಮ್ ನೀಡಲಾಗುತ್ತದೆ. ನನಗೆ ಸಣ್ಣ ರೂಮ್ ಅಥವಾ ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ ಆ ಸೌಲಭ್ಯದ ವ್ಯತ್ಯಾಸದ ಮೂಲಕ ನಾನು ಅವರಿಗಿಂತ ಕಮ್ಮಿ ಎನ್ನುವಂತೆ ನನ್ನನ್ನು ಭಾವಿಸಬೇಡಿ ಎನ್ನುವುದಷ್ಟೇ ನನ್ನ ವಾದ, ಎಂದಿದ್ದಾರೆ.
ಚಿತ್ರೀಕರಣದ ಸೆಟ್‌ಗಳಲ್ಲಿ ಸಹಾಯಕ ನಿರ್ದೇಶಕರ (Assistant Directors) ವರ್ತನೆಯ ಬಗ್ಗೆಯೂ ಮಾತನಾಡಿರುವ ಅವರು, ಶೂಟಿಂಗ್ ಸ್ಪಾಟ್‌ಗೆ ಬರುವಂತೆ ಸಹಾಯಕ ನಿರ್ದೇಶಕರು ಮೊದಲು ಹುಡುಗಿಯರನ್ನೇ (ನಟಿಯರನ್ನು) ಕರೆಯುತ್ತಾರೆ. ಅವರಿಗೆ ಪುರುಷ ನಟರನ್ನು ಕಂಡರೆ ಕೊಂಚ ಭಯವಿರುತ್ತದೆ. ಹೀಗಾಗಿ ಮಹಿಳಾ ನಟಿಯರನ್ನು ಅವರು ತುಂಬಾ ಸಲೀಲಾಗಿ ತೆಗೆದುಕೊಳ್ಳುತ್ತಾರೆ ಮತ್ತು ಸುಲಭವಾಗಿ ನಿಯಂತ್ರಿಸಬಹುದು ಎಂದು ಭಾವಿಸುತ್ತಾರೆ, ಎಂದು ಸೆಟ್‌ಗಳ ಒಳಗಿನ ಮನಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಕೃತಿ ಸನನ್, ಹಿಂದೆ ಬಾಲಿವುಡ್‌ನಲ್ಲಿ ಮಹಿಳೆಯರಿಗೆ ಸಿಗುತ್ತಿದ್ದ ಪಾತ್ರಗಳು ಕೇವಲ ಗ್ಲಾಮರ್ ಅಥವಾ ನಾಯಕನ ಪ್ರೇಯಸಿಯ ಪಾತ್ರಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ಈಗ ನಿಧಾನವಾಗಿ ಕಾಲ ಬದಲಾಗುತ್ತಿದೆ, ಮಹಿಳಾ ಪ್ರಧಾನ ಚಿತ್ರಗಳು ಯಶಸ್ವಿಯಾಗುತ್ತಿವೆ ಮತ್ತು ನಟಿಯರಿಗಾಗಿಯೇ ಗಟ್ಟಿಯಾದ, ಉತ್ತಮವಾದ ಪಾತ್ರಗಳನ್ನು ಚಿತ್ರಕಥೆಗಾರರು ಬರೆಯುತ್ತಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೂ, ಶೂಟಿಂಗ್ ಸೆಟ್‌ಗಳಲ್ಲಿನ ಈ ಮೂಲಭೂತ ತಾರತಮ್ಯಗಳು ಸಂಪೂರ್ಣವಾಗಿ ತೊಲಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

