Dailyhunt Logo
  • Light mode
    Follow system
    Dark mode
    • Play Story
    • App Story
BOMB THREAT : ಮೈಸೂರು ಕೋರ್ಟ್ ಗೆ ಬಾಂಬ್ ಬೆದರಿಕೆ - ರಕ್ಷಣಾ ಪಡೆಗಳಿಂದ ತೀವ್ರ ಶೋಧ!

BOMB THREAT : ಮೈಸೂರು ಕೋರ್ಟ್ ಗೆ ಬಾಂಬ್ ಬೆದರಿಕೆ - ರಕ್ಷಣಾ ಪಡೆಗಳಿಂದ ತೀವ್ರ ಶೋಧ!

Navasamaja.com 1 week ago

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ನ್ಯಾಯಾಲಯ ಸಂಕೀರ್ಣಗಳಿಗೆ ಬಾಂಬ್ (Bomb Threat) ಇಟ್ಟಿರುವುದಾಗಿ ಕಿಡಿಗೇಡಿಗಳು ಇ-ಮೇಲ್ (E-mail) ಮೂಲಕ ಬೆದರಿಕೆ ಹಾಕಿದ್ದು, ಇಡೀ ನಗರದಲ್ಲಿ ಕ್ಷಣಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಮೈಸೂರು ನಗರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರಿನ ಜಯನಗರದಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣ ಹಾಗೂ ಚಾಮರಾಜಪುರಂನಲ್ಲಿರುವ ಹಳೇ ಕೋರ್ಟ್ ಆವರಣ ಎರಡರಲ್ಲೂ ಏಕಕಾಲಕ್ಕೆ ಹೈ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಎಸಿಪಿ ಕೆ.ಸಿ. ಪ್ರಕಾಶ್, ಇನ್ಸ್‌ಪೆಕ್ಟರ್ ಬಿ.ಎಸ್. ರವಿಶಂಕರ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದ್ದಾರೆ.

ಇವರೊಂದಿಗೆ ಸ್ಪೋಟಕ ಪತ್ತೆ ದಳ (BDDS) ಹಾಗೂ ಶ್ವಾನ ದಳದ ಸಿಬ್ಬಂದಿ ಕೂಡ ಆಗಮಿಸಿದ್ದು, ಕೋರ್ಟ್ ಕೊಠಡಿಗಳು, ಕಾರಿಡಾರ್ ಹಾಗೂ ವಾಹನ ನಿಲ್ದಾಣ ಸೇರಿದಂತೆ ಪ್ರತಿಯೊಂದು ಮೂಲೆಯನ್ನೂ ಜಾಲಾಡುತ್ತಿದ್ದಾರೆ.

ಹುಸಿ ಬಾಂಬ್ ಬೆದರಿಕೆ ಶಂಕೆ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಕಿಡಿಗೇಡಿಗಳು ಇಂತಹ ಇ-ಮೇಲ್ ಕಳುಹಿಸಿದ್ದು, ಇದು ಹುಸಿ ಬಾಂಬ್ ಬೆದರಿಕೆ ಇರಬಹುದು ಎನ್ನಲಾಗಿದೆ. ಮೈಸೂರಿನಲ್ಲಿ ನ್ಯಾಯಾಲಯಕ್ಕೆ ಇಂತಹ ಇ-ಮೇಲ್ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲ ತಿಂಗಳ ಹಿಂದೆಯೂ ಸಹ ಇದೇ ಮಾದರಿಯಲ್ಲಿ ಕೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು.

ಕಳೆದ ವಾರವಷ್ಟೇ ಹೋಟೆಲ್‌ಗಳಿಗೆ ಬಂದಿತ್ತು ಮೇಲ್!

ಮೈಸೂರಿನಲ್ಲಿ ಕಳೆದ ವಾರವಷ್ಟೇ ಎರಡು ಪ್ರಮುಖ ಖಾಸಗಿ ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಇದೇ ರೀತಿ ಇ-ಮೇಲ್ ಬರಲಾಗಿತ್ತು. ಅಂದು ಕೂಡ ಪೊಲೀಸರು ಮತ್ತು ಬಾಂಬ್ ಪತ್ತೆ ದಳದವರು ಹೋಟೆಲ್ ಇಂಚಿಂಚೂ ತಪಾಸಣೆ ನಡೆಸಿದಾಗ ಅದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿತ್ತು.

ಇದೀಗ ನ್ಯಾಯಾಲಯವನ್ನು ಗುರಿಯಾಗಿಸಿಕೊಂಡು ಬಂದಿರುವ ಈ ಇ-ಮೇಲ್ ಹಿಂದೆ ಯಾರಿದ್ದಾರೆ ಮತ್ತು ಪದೇ ಪದೇ ಮೈಸೂರನ್ನು ಬೆದರಿಸುತ್ತಿರುವ ಈ ಕಿಡಿಗೇಡಿಗಳ ಜಾಲ ಯಾವುದು ಎಂಬುದರ ಪತ್ತೆಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja