ಬೆಂಗಳೂರು: ತಾಂತ್ರಿಕ ದೋಷಗಳು ಹಾಗೂ ವಿವಿಧ ಕಾರಣಗಳಿಂದಾಗಿ ಬಿಪಿಎಲ್ (BPL) ಪಡಿತರ ಚೀಟಿ (, Ration Card) ಕಳೆದುಕೊಂಡು ಕಂಗಾಲಾಗಿದ್ದ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಆಹಾರ ಇಲಾಖೆಯು ಹೊಸ ಭರವಸೆ ನೀಡಿದೆ.
ಇಲಾಖೆಯ ನಿಯಮಾವಳಿಗಳ ಪ್ರಕಾರ ಅನರ್ಹವೆಂದು ಗುರುತಿಸಿ ಎಪಿಎಲ್ ಕಾರ್ಡ್‌ಗಳಾಗಿ ಬದಲಾಗಿದ್ದ ಸುಮಾರು 4 ಲಕ್ಷಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿಗಳನ್ನು ಮರು ಸ್ಥಾಪಿಸಲು ಸರ್ಕಾರ (State Govt) ಮುಂದಾಗಿದೆ.
ಅತ್ಯಂತ ಮಹತ್ವದ ನಿರ್ಧಾರವಾಗಿ, ಈ ಹಿಂದೆ ನಿಗದಿಪಡಿಸಲಾಗಿದ್ದ 45 ದಿನಗಳ ಕಠಿಣ ಗಡುವನ್ನು ಈಗ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ನೈಜ ಫಲಾನುಭವಿಗಳು ಯಾವುದೇ ಆತುರವಿಲ್ಲದೆ ತಮ್ಮ ಕಾರ್ಡ್‌ಗಳನ್ನು ಸರಿಪಡಿಸಿಕೊಳ್ಳಲು ದಾರಿ ಸುಗಮವಾಗಿದೆ. ಸರ್ಕಾರವು 'ಕುಟುಂಬ ತಂತ್ರಾಂಶ'ದ ದತ್ತಾಂಶಗಳನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ರಾಜ್ಯದಲ್ಲಿ ಒಟ್ಟು 13,87,651 ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದವು. ಈ ಪೈಕಿ ನಾಲ್ಕು ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್ ದರ್ಜೆಗೆ ಇಳಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಕೆಲವು ಅರ್ಹ ಬಡವರಿಗೂ ಅನ್ಯಾಯವಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು, ಒಂದು ವೇಳೆ ತಮ್ಮ ಕಾರ್ಡ್ ನಿಜವಾಗಿಯೂ ಅರ್ಹವಾಗಿದ್ದರೆ ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲೂಕಿನ ತಹಸೀಲ್ದಾರ್‌ಗೆ ಅಪೀಲು ಸಲ್ಲಿಸಲು ಅವಕಾಶ ಕೊಟ್ಟಿದೆ. ಅರ್ಹತೆ ಸಾಬೀತಾದರೆ ಆ ಕಾರ್ಡ್‌ಗಳು ತಾನಾಗಿಯೇ ಮತ್ತೆ ಬಿಪಿಎಲ್ ಆಗಿ ಬದಲಾಗಲಿವೆ. ಮರುಸ್ಥಾಪನೆಗೆ ಇರಬೇಕಾದ ಕಡ್ಡಾಯ ಅರ್ಹತೆಗಳು ನಿಮ್ಮ ರದ್ದಾದ ಬಿಪಿಎಲ್ ಕಾರ್ಡ್ ಮತ್ತೆ ಚಾಲ್ತಿಗೆ ಬರಬೇಕಾದರೆ ಕೆಲವು ಪ್ರಮುಖ ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಮೊದಲನೆಯದಾಗಿ, ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಕೃಷಿ ಭೂಮಿಯ ಮಿತಿ 7 ಎಕರೆಗಿಂತ ಒಳಗಿರಬೇಕು ಮತ್ತು ಇಡೀ ಕುಟುಂಬದ ವಾರ್ಷಿಕ ವರಮಾನ 1.20 ಲಕ್ಷ ರೂಪಾಯಿ ಮೀರಿರಬಾರದು. ಈ ಮಾನದಂಡಗಳಿರುವ ನಾಗರಿಕರು ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದಾಗ, ಅಧಿಕಾರಿಗಳು ಖುದ್ದಾಗಿ ಸ್ಥಳ ತನಿಖೆ ನಡೆಸಿ ವರದಿ ನೀಡುತ್ತಾರೆ. ಅದರ ಆಧಾರದ ಮೇಲೆ ಆಹಾರ ಇಲಾಖೆಯ ಉಪ ನಿರ್ದೇಶಕರು ಬಿಪಿಎಲ್ ಕಾರ್ಡ್ ಅನ್ನು ಮರು ಸಕ್ರಿಯಗೊಳಿಸುತ್ತಾರೆ. ಆದರೆ, ಸತತ ಆರು ತಿಂಗಳಿಂದ ರೇಷನ್ ಪಡೆಯದ ಬಿಪಿಎಲ್ ಕಾರ್ಡ್‌ಗಳಿದ್ದರೆ ಅಂತಹವುಗಳನ್ನು ಇಲಾಖೆ ಅಮಾನತುಗೊಳಿಸಲಿದೆ. ಬದಲಾಗಲಿದೆಯೇ ಹಳೇ ಆದಾಯದ ಮಿತಿ? ಸದ್ಯ ಜಾರಿಯಲ್ಲಿರುವ ವಾರ್ಷಿಕ 1.20 ಲಕ್ಷ ರೂಪಾಯಿ ಆದಾಯದ ಮಿತಿಯು ಹಲವು ವರ್ಷಗಳ ಹಿಂದೆ ನಿಗದಿಯಾಗಿದ್ದಾಗಿದೆ. ಆದರೆ ಇಂದಿನ ದಿನಗಳಲ್ಲಿ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುವ ಸಾಮಾನ್ಯ ಸೆಕ್ಯೂರಿಟಿ ಗಾರ್ಡ್‌ನ ಆದಾಯವೂ ಈ ಮಿತಿಯನ್ನು ದಾಟುತ್ತದೆ. ಇದೇ ನಿಯಮವನ್ನು ಕಟ್ಟುನಿಟ್ಟಾಗಿ ಮುಂದುವರಿಸಿದರೆ ರಾಜ್ಯದಲ್ಲಿರುವ ಬಹುತೇಕ ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಅಪಾಯವಿರುವುದರಿಂದ, ವರಮಾನದ ಮಿತಿಯನ್ನು ಹೆಚ್ಚಿಸಬೇಕೆಂಬ ಬಲವಾದ ಒತ್ತಾಯ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಆದಾಯದ ಮಿತಿ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ವಿವಿಧ ಇಲಾಖೆಗಳ ಸಮನ್ವಯ ಸಭೆಯ ಬಳಿಕ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಅನರ್ಹರನ್ನು ವ್ಯವಸ್ಥೆಯಿಂದ ಹೊರಹಾಕಿದ ನಂತರವಷ್ಟೇ ರಾಜ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆ ಆರಂಭವಾಗಲಿದೆ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

