ಇಂದಿನ ದಿನಗಳಲ್ಲಿ ಆರೋಗ್ಯಕರ ಆಹಾರದ ಕಡೆಗೆ ಪ್ರತಿಯೊಬ್ಬರೂ ಗಮನ ನೀಡುತ್ತಿದ್ದಾರೆ. ಅದರಲ್ಲಿಯೂ ಸಿರಿಧಾನ್ಯಗಳ (Millets) ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗಿನ ಉಪಹಾರಕ್ಕೆ (Breakfast Recipe) ಸದಾ ಒಂದೇ ರೀತಿಯ ದೋಸೆ ತಿಂದು ಬೇಸರವಾಗಿದ್ದರೆ, ಪೌಷ್ಟಿಕಾಂಶಗಳಿಂದ ಕೂಡಿದ ಊದಲು ಧಾನ್ಯದ ದೋಸೆ (Barnyard Millet Dosa) ಮಾಡುವುದು ಹೇಗೆ ಎಂದು ತಿಳಿಯೋಣ.
ಊದಲು ಸಣ್ಣ ಸಿರಿಧಾನ್ಯಗಳಲ್ಲಿ ಒಂದಾಗಿದೆ. ಸಿಹಿ ಮತ್ತು ರುಚಿಯಾಗಿರುವ ಊದಲನ್ನು ಮುಖ್ಯವಾಗಿ ಭಾರತ, ಪಾಕಿಸ್ತಾನ, ನೇಪಾಳ, ಜಪಾನ್ ಮತ್ತು ಚೀನಾದ ಪರ್ವತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ರುಚಿಗೆ ಸಿಹಿಯಾಗಿರುವ ಊದಲಿನಿಂದ ಮಾಡಿದ ಆಹಾರಗಳು ಉತ್ತಮ ಬಲವರ್ಧಕವಾಗಿದೆ. ಇದು ಗ್ಲುಟೆನ್ ರಹಿತವಾಗಿದ್ದು, ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು. ಬೆಳಗಿನ ತಿಂಡಿಗೆ ಅಥವಾ ಸಂಜೆಯ ಲಘು ಉಪಹಾರಕ್ಕೆ ಇದು ಸೂಕ್ತವಾಗಿದೆ. ಬೇಕಾಗುವ ಪದಾರ್ಥಗಳು: ಮಾಡುವ ವಿಧಾನ:
* ಊದಲು ಹಿಟ್ಟು - 1 ಕಪ್
* ಅಕ್ಕಿ ಹಿಟ್ಟು - 1/4 ಕಪ್
* ಉದ್ದಿನ ಬೇಳೆ ಹಿಟ್ಟು - 1/4 ಕಪ್
* ಉಪ್ಪು - ರುಚಿಗೆ ತಕ್ಕಷ್ಟು
* ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
* ನೀರು - ಹಿಟ್ಟು ಕಲಸಲು ಬೇಕಾಗುವಷ್ಟು
* ಮೊದಲು ಒಂದು ಪಾತ್ರೆಯಲ್ಲಿ ಊದಲು ಹಿಟ್ಟು, ಅಕ್ಕಿ ಹಿಟ್ಟು ಮತ್ತು ಉದ್ದಿನ ಬೇಳೆ ಹಿಟ್ಟನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ಗಂಟಿಲ್ಲದಂತೆ ನಯವಾದ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ಈ ಹಿಟ್ಟನ್ನು ಮುಚ್ಚಿಟ್ಟು ರಾತ್ರಿಯಿಡೀ ಹುದುಗಲು ಬಿಡಿ. ಇದರಿಂದ ದೋಸೆಗೆ ಉತ್ತಮ ರುಚಿ ಮತ್ತು ಮೃದುತ್ವ ಸಿಗುತ್ತದೆ.
* ಮರುದಿನ ಬೆಳಗ್ಗೆ ಹೆಂಚನ್ನು ಕಾಯಿಸಿ, ಒಂದು ಸೌಟು ಹಿಟ್ಟನ್ನು ಹಾಕಿ ತೆಳುವಾಗಿ ಹರಡಿ.
* ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ, ಕೆಳಭಾಗ ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ನಂತರ ಮಗುಚಿ ಹಾಕಿ ಮತ್ತೊಂದು ಬದಿ ಚೆನ್ನಾಗಿ ಬೇಯಿಸಿದರೆ ಕರುಕುರಾದ ದೋಸೆ ಸಿದ್ಧ.
* ಬಿಸಿಬಿಸಿಯಾದ ಊದಲು ಧಾನ್ಯದ ದೋಸೆಯನ್ನು ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಲು ನೀಡಿದರೆ ಅತ್ಯಂತ ರುಚಿಯಾಗಿರುತ್ತದೆ.

