ಬೆಂಗಳೂರು: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಮಹತ್ವದ ಘೋಷಣೆ ಮಾಡಿದರು. ತಮ್ಮ ಮೊದಲ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ಆರು ನಿರ್ಧಾರಗಳ ಕುರಿತು ಅವರು ಮಾಹಿತಿ ನೀಡಿದರು.
ಸಿಎಂ ಆಗಿ ಇಂದು ಪ್ರಮಾಣವಚನ ಸ್ವೀಕರಿಸಿದ ನಂತರ ಅವರ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ಸಚಿವ ಸಂಪುಟ ಸಭೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಯವರು ಈ ಘೋಷಣೆಯನ್ನು ಪ್ರಕಟಿಸಿದರು. ಪದವಿ ಕಾಲೇಜಿನವರೆಗೂ ಗಂಡು-ಹೆಣ್ಣು ಎಲ್ಲಾ ವಿದ್ಯಾರ್ಥಿಗಳಿಗೂ ಫ್ರೀ ಬಸ್ ಪಾಸ್ ನೀಡಲಾಗುವುದು. ಅಲ್ಲದೇ ಇದಕ್ಕಾಗಿ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿ ತಾವು ಕುಳಿತಿರುವ ಕುರ್ಚಿ ಇದು ತಮ್ಮದ್ದಲ್ಲ, ಇದು ರಾಜ್ಯದ ಜನರದ್ದು ಎಂದರು. ರಾಜ್ಯದಲ್ಲಿ 10,000 ಭಾರತ್ ಜೋಡೋ ಯುವಕರ ಸಂಘ ಸ್ಥಾಪಿಸಲಾಗುವುದು. ಪ್ರತಿ ಸಂಘಕ್ಕೆ 10 ಲಕ್ಷ ಅನುದಾನ ನೀಡಲಾಗುವುದು. ಗ್ರಾಮೀಣ ಪ್ರತಿಭೆಗಳ ಶೋಧಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯುವಕರ ಸಂಘವನ್ನು ಪ್ರತಿ ಪಂಚಾಯಿತಿಗೂ ವಿಸ್ತರಿಸಲಾಗುವುದು ಎಂದು ಸಿಎಂ ವಿವರಿಸಿದರು.
ಮೊದಲ ಸಂಪುಟದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್, ಖಾಲಿ ಹುದ್ದೆಗಳ ಭರ್ತಿಯ ಪ್ರಕ್ರಿಯೆಗೆ ಚುರುಕು, ಭಾರತ್ ಜೋಡೋ ಸಂಘ ಸ್ಥಾಪನೆ, ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ, ಭೂಗ್ಯಾರಂಟಿ ಯೋಜನೆಯನ್ನು ರಾಜ್ಯದುದ್ದಕ್ಕೂ ವಿಸ್ತರಣೆ, ಮೂರು ಅಂತಸ್ತಿನ ಕಟ್ಟಡಗಳಿಗೆ ಒಸಿ ವಿನಾಯಿತಿಯನ್ನು ಸಿಎಂ ಘೋಷಣೆ ಮಾಡಿದರು.

