ನವದೆಹಲಿ: ಇದೇ ಜೂನ್ 21 ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET-UG 2026) ಮರುಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾದರಿಯಲ್ಲಿ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ (Supreme Court) ಸೋಮವಾರ (ಜೂ.1) ನಿರಾಕರಿಸಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಪೆನ್ ಮತ್ತು ಪೇಪರ್ ಮಾದರಿಯಲ್ಲೇ ಪರೀಕ್ಷೆ ಮುಂದುವರಿಯಲಿದ್ದು, ಪದ್ಧತಿ ಬದಲಾಯಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಸದ್ಯಕ್ಕೆ ಇಂತಹ ಯಾವುದೇ ವಿನಾಯಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡುವ ಮೂಲಕ ಜೂನ್‌ನಲ್ಲಿ ನಡೆಯಲಿರುವ ಮರುಪರೀಕ್ಷೆಗೆ ಹಳೆ ನಿಯಮವೇ ಅನ್ವಯವಾಗುವಂತೆ ಮಾಡಿದೆ. ರಾಷ್ಟ್ರೀಯ ಜನತಾ ದಳ ಪಕ್ಷದ ಸಂಸದ ಸುಧಾಕರ್ ಸಿಂಗ್ ಅವರು ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಈ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಸೋಮವಾರ ನಡೆದ ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ತಾವು ಉಳಿದ ಬೇಡಿಕೆಗಳನ್ನು ಒತ್ತಾಯಿಸುತ್ತಿಲ್ಲ, ಕೇವಲ ಮುಂಬರುವ ಮರುಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ (ಸಿಬಿಟಿ) ಮಾದರಿಯಲ್ಲಿ ನಡೆಸಬೇಕು ಎಂಬ ಒಂದೇ ಒಂದು ಮನವಿಗೆ ಮಾತ್ರ ಬದ್ಧರಾಗಿದ್ದೇವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಆದರೆ ಅರ್ಜಿದಾರರ ವಾದವನ್ನು ಒಪ್ಪದ ನ್ಯಾಯಮೂರ್ತಿ ನರಸಿಂಹ ಅವರು, ಈ ಹಿಂದೆಯೂ ಇಂತಹದೇ ಬೇರೆ ಅರ್ಜಿಗಳು ನ್ಯಾಯಾಲಯದ ಮುಂದೆ ಬಂದಿದ್ದವು ಎಂಬುದನ್ನು ನೆನಪಿಸಿದರು. ಈ ಮಾದರಿಯ ಹಲವು ಅರ್ಜಿಗಳನ್ನು ಕೋರ್ಟ್ ಈಗಾಗಲೇ ವಜಾಗೊಳಿಸಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದರು. ಸುಪ್ರೀಂ ಕೋರ್ಟ್‌ನ ಈ ನಿರ್ಧಾರದಿಂದಾಗಿ ನೀಟ್ ಮರುಪರೀಕ್ಷೆಯು ಎಂದಿನಂತೆ ಸಾಂಪ್ರದಾಯಿಕ ಪೆನ್ ಮತ್ತು ಪೇಪರ್ ಬಳಕೆ ವಿಧಾನದಲ್ಲೇ ನಡೆಯುವುದು ಖಚಿತವಾಗಿದೆ. ಮುನ್ನೆಚ್ಚರಿಕೆಗಳ ಹೊರತಾಗಿಯೂ ವ್ಯವಸ್ಥೆ ವಿಫಲವಾಗಿದ್ದು ಹೇಗೆ? ದೇಶದ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇಡೀ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ. ಮುನ್ನೆಚ್ಚರಿಕೆಗಳ ಹೊರತಾಗಿಯೂ ವ್ಯವಸ್ಥೆ ವಿಫಲವಾಗಿದ್ದು ಹೇಗೆ ಎಂಬ ಮಾಹಿತಿಗಳು ಎಳೆ ಎಳೆಯಾಗಿ ಹೊರಬರುತ್ತಿವೆ. ಕಳೆದ 2024ರ ಪರೀಕ್ಷೆಯಲ್ಲಾದ ಲೋಪದೋಷಗಳಿಂದ ಪಾಠ ಕಲಿತಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಈ ಬಾರಿ ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ದೆಹಲಿಯಲ್ಲಿ ಒಂದು ಸುಸಜ್ಜಿತ ಹಾಗೂ ಅತ್ಯಂತ ರಹಸ್ಯವಾದ ಕಚೇರಿಯನ್ನು ಸಿದ್ಧಪಡಿಸಿತ್ತು. ಮೊಬೈಲ್, ಲ್ಯಾಪ್‌ಟಾಪ್ ಅಥವಾ ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದ, ಕೇವಲ ನಂಬಿಕಸ್ಥ ಅಧಿಕಾರಿಗಳಿಗೆ ಮಾತ್ರ ಪ್ರವೇಶವಿದ್ದ ಈ ಕೋಣೆಯಿಂದಲೇ ಪತ್ರಿಕೆ ಸೋರಿಕೆಯಾಗಿರುವುದು ಈಗ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಇಡೀ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇದುವರೆಗೆ ಸುಮಾರು 13 ಜನರನ್ನು ಬಂಧಿಸಿದ್ದಾರೆ. ಆದರೆ ಸರಕಾರದ ಆಂತರಿಕ ಮೂಲಗಳ ಪ್ರಕಾರ, ಈ ಬಂಧನ ಕೇವಲ ಮೇಲ್ಪದರದ ಕಥೆಯಾಗಿದ್ದು, ಇದರ ಹಿಂದಿನ ಅಸಲಿ ಹೊಲಸು ಇನ್ನು ಆಳದಲ್ಲಿದೆ ಎನ್ನಲಾಗಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಪರೀಕ್ಷಾ ಮಂಡಳಿಯು ಅತ್ಯಂತ ನಂಬಿಕಸ್ಥರೆಂದು ಭಾವಿಸಿ ಪತ್ರಿಕೆ ಸಿದ್ಧಪಡಿಸುವ ಪ್ರಮುಖ ಜವಾಬ್ದಾರಿ ನೀಡಿದ್ದ ಒಳಗಿನವರೇ ಈ ಭದ್ರತಾ ಚಕ್ರವ್ಯೂಹವನ್ನು ಭೇದಿಸಿದ್ದಾರೆ.

