ಬೆಂಗಳೂರು ದಕ್ಷಿಣ (ರಾಮನಗರ): ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ (HC Balakrishna) ಅವರಿಗೆ ನ್ಯಾಯಾಲಯವು (Court) ಬಿಗ್ ಶಾಕ್ ನೀಡಿದೆ. ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸತತವಾಗಿ ಗೈರುಹಾಜರಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.
ಈ ಹಿಂದೆ (2018) ವಿಧಾನಸಭಾ ಚುನಾವಣೆಯ ವೇಳೆ ಬಾಲಕೃಷ್ಣ ಅವರು ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಆಪಾದನೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಬಕಾರಿ ಕಾಯ್ದೆ ಹಾಗೂ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಅಂದಿನಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಿರಂತರವಾಗಿ ವಿಚಾರಣೆಗೆ ಶಾಸಕ ಕೋರ್ಟ್ಗೆ ಗೈರಾಗಿದ್ದರಿಂದ ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ರಾಮನಗರದ ಬಸವನಪುರ ಗ್ರಾಮದ ಸಮೀಪದ ಹೀಲ್ ವ್ಯೂ ರೆಸಾರ್ಟ್ನಲ್ಲಿ ಬಾಲಕೃಷ್ಣ ಕಾರ್ಯಕರ್ತರೊಂದಿಗೆ ಸಭೆ ಮಾಡಿದ್ದರು. ಆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದ ಕಾರಣ, ಅಲ್ಲಿಗೆ ತಹಶೀಲ್ದಾರ್ ಅವರು ಮಾಹಿತಿ ಆಧರಿಸಿ ದಾಳಿ ಮಾಡಿದ್ದರು. ಸ್ಥಳಕ್ಕೆ ತಹಶೀಲ್ದಾರ್ ಜೊತೆ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿಗಳು ಸಹ ಭೇಟಿ ನೀಡಿದ್ದರು. ಆ ಬಳಿಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಆಪ್ತರೂ ಆಗಿರುವ ಬಾಲಕೃಷ್ಣ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯೂ ಹೌದು. ಇದೀಗ ಶಾಸಕರಿಗೆ ಈ ಕಾನೂನು ಪ್ರಕ್ರಿಯೆ ಹೊಸ ತಲೆನೋವು ತಂದಿಟ್ಟಿದೆ.

