ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಇತ್ತ ಸಚಿವಾಲಯ ಮತ್ತು ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ (CM Office) ಭಾರಿ ಆಡಳಿತಾತ್ಮಕ ಬದಲಾವಣೆಗಳು ಆರಂಭವಾಗಿವೆ.
ಹೊಸ ಸರ್ಕಾರದ ಆಡಳಿತ ಯಂತ್ರಕ್ಕೆ ದಕ್ಷತೆಯ ವೇಗ ನೀಡುವ ಸಲುವಾಗಿ ರಾಜ್ಯದ ಹಿರಿಯ ಮತ್ತು ಪ್ರಭಾವಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರದ ಜಂಟಿ ಕಾರ್ಯದರ್ಶಿಗಳು ರಾಜ್ಯಪಾಲರ ಆದೇಶದ ಮೇರೆಗೆ ಅಧಿಕೃತ ಅದಿಸೂಚನೆ ಹೊರಡಿಸಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ಆದೇಶದ ಪ್ರಕಾರ, ನೂತನ ಮುಖ್ಯಮಂತ್ರಿಗಳ ಅತ್ಯಂತ ನಿಕಟ ಹಾಗೂ ಪ್ರಭಾವಿ ಹುದ್ದೆಯಾದ 'ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ' (Additional Chief Secretary to Chief Minister) ಸ್ಥಾನಕ್ಕೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ 1993ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿ ನಾಥ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಇದುವರೆಗೆ ಈ ಜವಾಬ್ದಾರಿಯಲ್ಲಿದ್ದ ಅಂಜುಮ್ ಪರ್ವೇಜ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸದ್ಯ ಯಾವುದೇ ಹುದ್ದೆ ತೋರಿಸಲಾಗಿಲ್ಲ. ಇನ್ನು ತುಷಾರ್ ಗಿರಿ ನಾಥ್ ಅವರು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಜೊತೆಗೆ ತಮ್ಮ ಹಳೆಯ ಖಾತೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನೂ ಹೆಚ್ಚುವರಿ ಪ್ರಭಾರವಾಗಿ (Concurrent Charge) ಮುಂದುವರಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಮುಖ್ಯಮಂತ್ರಿಗಳ ಕಾರ್ಯಾಲಯದ ಮತ್ತೊಂದು ಪ್ರಮುಖ ಹುದ್ದೆಯಾದ 'ಮುಖ್ಯಮಂತ್ರಿಗಳ ಕಾರ್ಯದರ್ಶಿ' (Secretary to Chief Minister) ಸ್ಥಾನಕ್ಕೂ ಹೊಸ ಅಧಿಕಾರಿಯ ನೇಮಕವಾಗಿದೆ.
ಇದುವರೆಗೆ ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ 2008ರ ಬ್ಯಾಚ್‌ನ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ಪಿ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಶ್ರೀಮತಿ ಕಾವೇರಿ ಬಿ.ಬಿ. ಅವರನ್ನು ಸಿಎಂ ಕಚೇರಿಯಿಂದ ವರ್ಗಾಯಿಸಲಾಗಿದೆ.
ಇಷ್ಟೇ ಅಲ್ಲದೆ ರಾಜೇಂದ್ರ ಚೋಳನ್ ಅವರಿಗೆ ರಾಜ್ಯದ ಅತ್ಯಂತ ಪ್ರಮುಖ ಇಂಧನ ಸಂಸ್ಥೆಯಾದ 'ಕರ್ನಾಟಕ ವಿದ್ಯುತ್ ನಿಗಮ ನಿಯಮಿತ'ದ (KPCL) ವ್ಯವಸ್ಥಾಪಕ ನಿರ್ದೇಶಕರಾಗಿ (Managing Director) ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಮೂಲಕ ಇದುವರೆಗೆ ಕೆಪಿಸಿಎಲ್ ಎಂಡಿ ಹುದ್ದೆಯ ಹೆಚ್ಚುವರಿ ಪ್ರಭಾರ ಹೊಂದಿದ್ದ ಹಿರಿಯ ಅಧಿಕಾರಿ ಗೌರವ್ ಗುಪ್ತಾ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.
ಮುಖ್ಯಮಂತ್ರಿಗಳ ಪಟ್ಟಾಭಿಷೇಕ ಮುಗಿಯುತ್ತಿದ್ದಂತೆ ಹೊರಬಿದ್ದಿರುವ ಈ ಹೈ-ಪ್ರೊಫೈಲ್ ವರ್ಗಾವಣೆ ಆದೇಶವು ಸಚಿವಾಲಯದ ಕಾರಿಡಾರ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

