ನವದೆಹಲಿ: ಅಮೆರಿಕದ ಡಾಲರ್ (US Dollar) ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಬ್ರಿಕ್ಸ್ (BRICS) ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರಕ್ಕಾಗಿ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು (Digital Payment System) ಜಾರಿಗೆ ತರಲು ಭಾರತ (India) ಕಾರ್ಯಯೋಜನೆ ರೂಪಿಸಿದೆ.
ಪ್ರಸಕ್ತ ಸಾಲಿನ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತವು, ಸದಸ್ಯ ದೇಶಗಳ ನಡುವೆ ಸರಳ ಹಾಗೂ ಸುಗಮ ವ್ಯಾಪಾರ ವಹಿವಾಟಿಗೆ ನೆರವಾಗಲು ಡಿಜಿಟಲ್ ಕರೆನ್ಸಿಗಳ ಬಳಕೆಯ ಪ್ರಸ್ತಾಪವನ್ನು ಮುಂದಿಡಲು ನಿರ್ಧರಿಸಿದೆ. ನವದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ಇದರ ಭಾಗವಾಗಿ ಬ್ರಿಕ್ಸ್ ರಾಷ್ಟ್ರಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ದೇಶೀಯ ಪಾವತಿ ಜಾಲಗಳನ್ನು ಒಂದಕ್ಕೊಂದು ಬೆಸೆಯುವ ಹೊಸ ತಾಂತ್ರಿಕ ಪಾವತಿ ವ್ಯವಸ್ಥೆಯನ್ನು ಭಾರತ ಪ್ರಸ್ತಾಪಿಸಲಿದೆ. ಈ ಯೋಜನೆಯಡಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಇ-ರೂಪಾಯಿ, ಚೀನಾದ ಇ-ಸಿಎನ್‌ವೈ, ರಷ್ಯಾದ ಡಿಜಿಟಲ್ ರೂಬಲ್ ಮತ್ತು ಬ್ರೆಜಿಲ್‌ನ ಡ್ರೆಕ್ಸ್‌ನಂತಹ ಕೇಂದ್ರ ಬ್ಯಾಂಕ್‌ಗಳ ಡಿಜಿಟಲ್ ಕರೆನ್ಸಿಗಳನ್ನು ಪರಸ್ಪರ ಜೋಡಿಸಲು ಚಿಂತನೆ ನಡೆಸಲಾಗಿದೆ. ಇದರೊಂದಿಗೆ ಭಾರತದ ಜನಪ್ರಿಯ ಯುಪಿಐ ಹಾಗೂ ಬ್ರೆಜಿಲ್‌ನ 'ಪಿಕ್ಸ್' ನಂತಹ ತ್ವರಿತ ಪಾವತಿ ವ್ಯವಸ್ಥೆಗಳನ್ನು ಒಂದೇ ಸೂರಿನಡಿ ಸಂಪರ್ಕಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಸ್ತಾವಿತ ಡಿಜಿಟಲ್ ಪಾವತಿ ವ್ಯವಸ್ಥೆಯು ಜಾರಿಗೆ ಬಂದರೆ, ಬ್ರಿಕ್ಸ್ ದೇಶಗಳು ಯಾವುದೇ ಮೂರನೇ ವ್ಯಕ್ತಿ ಅಥವಾ ಮಧ್ಯವರ್ತಿ ಕರೆನ್ಸಿಯ ಹಸ್ತಕ್ಷೇಪವಿಲ್ಲದೆ ನೇರವಾಗಿ ತಮ್ಮದೇ ರಾಷ್ಟ್ರೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸಬಹುದಾಗಿದೆ. ಸುರಕ್ಷಿತ ಹಾಗೂ ಪಾರದರ್ಶಕ ವಹಿವಾಟಿಗಾಗಿ ಈ ನೂತನ ಪಾವತಿ ವ್ಯವಸ್ಥೆಯನ್ನು ವಿತರಣಾ-ಲೆಡ್ಜರ್ ಮತ್ತು ಸ್ಮಾರ್ಟ್-ಕಾಂಟ್ರಾಕ್ಟ್ ಮಾದರಿಯ ಆಧುನಿಕ ತಂತ್ರಜ್ಞಾನ ಬಳಸಿ ರೂಪಿಸಲಾಗುತ್ತಿದೆ.

