Dailyhunt
BY ELECTION: ದಾವಣಗೆರೆ ದಕ್ಷಿಣ ಮತ ಸಮರ, ಕಣದಲ್ಲಿ 25 ಮಂದಿ, ಮುಸ್ಲಿಂ ಅಭ್ಯರ್ಥಿಗಳೇ 13 ಜನ

BY ELECTION: ದಾವಣಗೆರೆ ದಕ್ಷಿಣ ಮತ ಸಮರ, ಕಣದಲ್ಲಿ 25 ಮಂದಿ, ಮುಸ್ಲಿಂ ಅಭ್ಯರ್ಥಿಗಳೇ 13 ಜನ

Navasamaja.com 1 week ago

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ದಕ್ಷಿಣಾ ವಿಧಾನಸಭಾ (BY Election) ಕ್ಷೇತ್ರಕ್ಕೆ ಮತದಾನ ಆರಂಭ ಆಗೋದಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌- ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ.

ಇನ್ನೇನು ಮತದಾನಕ್ಕೆ ಕೆಲವೇ ಗಂಟೆಗಳೂ ಬಾಕಿ ಇದ್ದು ಪ್ರಮುಖ ಪಕ್ಷದ ನಾಯಕರುಗಳು ಎಲೆಕ್ಷನ್ ಎದುರಿಸಲು ಸಜ್ಜಾಗಿದ್ದಾರೆ.

ಕೈ v/s ಕಮಲ ಬಿಗ್ ಫೈಟ್!
ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಸಂಸದೆ ಡಾ.ಪ್ರಭಾ ಅವರ ಹಿರಿಯ ಪುತ್ರ, ವಿದೇಶದಲ್ಲಿ ವ್ಯಾಸಂಗ ಮಾಡಿಬಂದಿರುವ 27 ವರ್ಷ ವಯಸ್ಸಿನ ಸಮರ್ಥ್‌, ಅಜ್ಜ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಟಿಕೆಟ್‌ ಗಿಟ್ಟಿಸಿದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಗೆದ್ದು ಭದ್ರಕೋಟೆಯನ್ನು ಛಿದ್ರಗೊಳಿಸಬಹುದು ಎಂಬ ವಿಶ್ವಾಸ ಕಮಲ ಪಾಳಯದಲ್ಲಿದೆ. ಸಿದ್ದರಾಮಯ್ಯ ಈಗ ಅಹಿಂದ ವಿರೋಧಿ ಎನ್ನುತ್ತಿರುವ ಬಿಜೆಪಿಯು, ಸಾಮಾನ್ಯ ವರ್ಗಕ್ಕೆ ಸೇರಿದ ಕ್ಷೇತ್ರದಲ್ಲೂ, 55 ಸಾವಿರದಷ್ಟು ಮತಗಳನ್ನು ಹೊಂದಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಣೆಹಾಕದೇ ಪರಿಶಿಷ್ಟ ಪಂಗಡದ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್‌ ನೀಡಿರುವುದನ್ನು ಹೆಗ್ಗಳಿಕೆ ಎಂದೇ ಹೇಳಿಕೊಳ್ಳುತ್ತಿದೆ. ಇಬ್ಬರ ಮಧ್ಯೆ ಈಗಾ ಜಿದ್ದಾಜಿದ್ದಿ ಶುರುವಾಗಿದೆ.

ಹಳೆ ದಾವಣಗೆರೆ ಹಾಗೂ 25ಕ್ಕೂ ಅಧಿಕ ಗ್ರಾಮಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಎದ್ದು ಕಾಣುವಂಥ ಅಭಿವೃದ್ಧಿ ಆಗಿಲ್ಲ ಎಂಬ ಆರೋಪ ಆಡಳಿತಾರೂಢ ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಬಹುದು ಎಂಬ ಭೀತಿ ಒಂದೆಡೆ ಇದೆ. ಪಂಚ ಗ್ಯಾರಂಟಿಗಳ ಫಲಾನುಭವಿ ಬಡಜನರು ಕೈ ಬಿಡಲಾರರು ಎಂಬ ಆತ್ಮವಿಶ್ವಾಸವೂ ಮತ್ತೊಂದೆಡೆ ಇದೆ. ಕಾಂಗ್ರೆಸ್, ಬಿಜೆಪಿ ಸೇರಿ ಬರೋಬ್ಬರಿ 25 ಜನ ಕಣದಲ್ಲಿದ್ದಾರೆ. ಮೇಲಾಗಿ ಅಲ್ಪಸಂಖ್ಯಾಂತರೇ ಅಧಿಕ ಇರುವ ಕ್ಷೇತ್ರವಾದ ಹಿನ್ನೆಲೆ ಆ ಸಮುದಾಯ ಅಭ್ಯರ್ಥಿಗಳೇ ಎಸ್ಡಿಪಿಐ ಸೇರಿ 13 ಜನ ಇದ್ದಾರೆ.

ಮತದಾರರ ಸಂಖ್ಯೆ ಎಷ್ಟು?

  • ಒಟ್ಟು ಮತದಾರರು 2, 31,683
  • ಮಹಿಳಾ ಮತದಾರರ ಸಂಖ್ಯೆ 1,17690,
  • ಪುರುಷ ಮತದಾರರ ಸಂಖ್ಯೆ 1,14010
  • ತೃತೀಯ ಲಿಂಗಿಗಳು 43 ಗಳಿದ್ದಾರೆ.

ಜಾತಿವಾರು ಲೆಕ್ಕಾಚಾರ

  • ಲಿಂಗಾಯತರು - 37,845
  • ನಾಯಕರು (ST) - 31,729
  • ಎಸ್ಸಿ (ಎಲ್ಲಾ ಒಳ ಜಾತಿಗಳು) - 29,106
  • ಮುಸ್ಲಿಂ - 64,246
  • ಕುರುಬ - 16,854
  • ಮರಾಠರು - 14,868
  • ಉಪ್ಪಾರರು - 8,352
  • ಜೈನರು - 5,386
  • ಇತರ ಸಮುದಾಯ - 23,300
  • ಒಟ್ಟು - 2,31,683

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ76 ಮತಗಟ್ಟೆಗಳನ್ನ ಅತಿ ಸೂಕ್ಷ್ಮ ಎಂದು ಗುರ್ತಿಸಲಾಗಿದೆ. 244 ಮತಗಟ್ಟೆ ಅಧಿಕಾರಿಗಳು, ಎಲ್ಲ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ 25 ಅಭ್ಯರ್ಥಿ ಕಣದಲ್ಲಿದ್ದಾರೆ. ಪ್ರಜಾಪ್ರಭುತ್ವದ ಮಹತ್ವದ ಕಾರ್ಯಕ್ಕೆ ಸಿಬ್ಬಂದಿಗಳು ಸಜ್ಜಾಗಿದ್ದಾರೆ.

ಎಲ್ಲಾ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ಇದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯಿಂದ 38 ಸಶಸ್ತ್ರ ಮೀಸಲು ಪಡೆಯ ತುಕಡಿಗಳು, 37 ಎಎಸ್‌ಐಗಳು, 164 ಪ್ರೊಬೇಷನರಿ ಪಿಎಸ್ ಐಗಳು, 47 ಹೆಡ್ ಕಾನ್ಸ್ ಸ್ಟೇಬರ್, 284 ಕಾನ್ಸ್ ಸ್ಟೇಬಲ್ ಹಾಗೂ 212 ಮಹಿಳಾ ಕಾನ್ಸ್ ಸ್ಟೇಬಲ್ಗಳನ್ನ ಭದ್ರತೆ ನಿಯೋಜನೆ ಮಾಡಲಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಖಾಡ ಸಜ್ಜಾಗಿದೆ, ಮತದಾರ ಪ್ರಭು ಕೂಡ ಸರತಿ ಸಾಲಿನಲ್ಲಿ ನಿಂತು ಮತ ಚಾಲಾಯಿಸಲು ಸಿದ್ಧನಾಗಿದ್ದಾನೆ, ಮೇ 4ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಜನ ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಅನ್ನೋದು ಗೊತ್ತಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja