Dailyhunt
BY ELECTION : ದಾವಣಗೆರೆ ದಕ್ಷಿಣ ಉಪಸಮರ, ಉಭಯ ಪಕ್ಷಗಳ ನಾಯಕರ ಅಬ್ಬರದ ಪ್ರಚಾರ

BY ELECTION : ದಾವಣಗೆರೆ ದಕ್ಷಿಣ ಉಪಸಮರ, ಉಭಯ ಪಕ್ಷಗಳ ನಾಯಕರ ಅಬ್ಬರದ ಪ್ರಚಾರ

Navasamaja.com 2 weeks ago

ದಾವಣಗೆರೆ: ದಾವಣಗೆರೆ ದಕ್ಷಿಣ (Davangere South) ವಿಧಾನಸಭಾ ಕ್ಷೇತ್ರದ ಉಪಚುನಾವಣಾ (By Election) ಕಣ ಈಗ ರಂಗೇರಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ನ (Congress) ಭದ್ರಕೋಟೆಯನ್ನು ಭೇದಿಸಲು ಬಿಜೆಪಿ (BJP) ಘಟಾನುಘಟಿ ನಾಯಕರು ಬೀದಿಗಿಳಿದಿದ್ದರೆ, ಇತ್ತ ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ಸರ್ವಶಕ್ತಿ ಬಳಸುತ್ತಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ನೇರವಾಗಿ ಅಖಾಡಕ್ಕಿಳಿದಿರುವುದು ಚುನಾವಣಾ ಕಾವು ಏರುವಂತೆ ಮಾಡಿದೆ.

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಪರ ಮತಬೇಟೆ ನಡೆಸಲು ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಶ್ರೀರಾಮುಲು ಮತ್ತು ಸಿ.ಟಿ. ರವಿ ಅವರಂತಹ ಪ್ರಭಾವಿ ನಾಯಕರು ಕ್ಷೇತ್ರದುದ್ದಕ್ಕೂ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಕೇಸರಿ ಪಡೆ, ಈಗ ಮತಬ್ಯಾಂಕ್‌ಗಳ ಮೇಲೆ ಕಣ್ಣಿಟ್ಟಿದೆ.

ವಿಶೇಷವಾಗಿ ಲಿಂಗಾಯತ ಮತಗಳು ಛಿದ್ರವಾಗದಂತೆ ತಡೆಯುವುದು ಮತ್ತು ಅಹಿಂದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ತಂತ್ರ ರೂಪಿಸುತ್ತಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ 'ಕುಟುಂಬ ರಾಜಕಾರಣ'ದ ಅಸ್ತ್ರ ಬಳಸಿ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರು, "ಯಾವಾಗಲೂ ಜನರ ಜೊತೆಗಿರುವ ಅಭ್ಯರ್ಥಿಯನ್ನು ಗೆಲ್ಲಿಸಿ" ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಲ್ಲಿ ಸಿಎಂ-ಡಿಸಿಎಂ ರೋಡ್ ಶೋ:

ಇತ್ತ ಕಾಂಗ್ರೆಸ್ ತನ್ನ ಹಿಡಿತವನ್ನು ಬಿಟ್ಟುಕೊಡದಿರಲು ಸಜ್ಜಾಗಿದೆ. ನಿನ್ನೆ ಗ್ರಾಮಾಂತರ ಭಾಗದಲ್ಲಿ ಮಿಂಚಿನ ಸಂಚಾರ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್, ಇಂದು ನಗರ ಪ್ರದೇಶಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ಬಂಬೂ ಬಜಾರ್‌ನಿಂದ ಆರಂಭವಾದ ಈ ರೋಡ್ ಶೋ ಹೊಂಡಾ ಸರ್ಕಲ್, ಹಗೆದಿಬ್ಬ ಸರ್ಕಲ್, ಅಜಾದ್ ನಗರ ಮತ್ತು ಬಾಷಾ ನಗರಗಳ ಮೂಲಕ ಸಾಗಿತು. ಬಳಿಕ ಅಖ್ತರ್ ರಾಜಾ ಸರ್ಕಲ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಾಯಕರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಮೇಲೆ ಸ್ವಲ್ಪ ಮಟ್ಟಿನ ಅಸಮಾಧಾನ ಹೊಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಅಸಮಾಧಾನವನ್ನು ಹೋಗಲಾಡಿಸಿ, ಅಲ್ಪಸಂಖ್ಯಾತ ಮತಗಳನ್ನು ಭದ್ರಪಡಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಖುದ್ದಾಗಿ ರಂಗಪ್ರವೇಶ ಮಾಡಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿರುವ ಏರಿಯಾಗಳಲ್ಲಿ ಸಂಚರಿಸುವ ಮೂಲಕ ಸಮುದಾಯದ ವಿಶ್ವಾಸ ಗಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ಒಟ್ಟಾರೆಯಾಗಿ ದಾವಣಗೆರೆ ದಕ್ಷಿಣದ ಉಪಚುನಾವಣೆ ಈಗ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja