ರಾಜ್ಯದ ಹಿರಿಯ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ ಹಾಗೂ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ (Davangere South) ಮತ್ತು ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರಗಳಿಗೆ ನಾಳೆ (ಏಪ್ರಿಲ್ 9) ಉಪಚುನಾವಣೆ (By Election)ಮತ್ತು ನಡೆಯಲಿದೆ.
ಒಂದು ವೇಳೆ ನೀವೇನಾದರೂ ಈ ಬಾರಿ ಮೊದಲ ಬಾರಿಗೆ ಮತ (Voting) ಹಾಕುತ್ತಿದ್ದರೆ, ಮತಗಟ್ಟೆಗೆ ಹೋಗುವ ಮುನ್ನ ಈ ಸರಳ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.. ಮತದಾರರ ಪಟ್ಟಿಯಲ್ಲಿ ಹೆಸರು ಚೆಕ್ ಮಾಡಿಕೊಳ್ಳಿ ಮತದಾನದ ದಿನದಂದು ಮತಗಟ್ಟೆಗೆ ಹೋಗುವ ಮೊದಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎನ್‌ವಿಎಸ್‌ಪಿ (NVSP) ಪೋರ್ಟಲ್ ಅಥವಾ 'ವೋಟರ್ ಹೆಲ್ಪ್‌ಲೈನ್' ಆಪ್ ಮೂಲಕ ನಿಮ್ಮ ಎಪಿಕ್ (EPIC) ಸಂಖ್ಯೆ ಬಳಸಿ ಹೆಸರು ಮತ್ತು ಮತಗಟ್ಟೆಯ ವಿವರಗಳನ್ನು ನೀವು ಸುಲಭವಾಗಿ ಪಡೆಯಬಹುದು. ಇದು ಮತದಾನದ ದಿನದ ಗೊಂದಲವನ್ನು ತಪ್ಪಿಸುತ್ತದೆ. ಮತದಾರರಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ? ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹ ದಿನಾಂಕದ ವೇಳೆಗೆ ನಿಮಗೆ ಕನಿಷ್ಠ 18 ವರ್ಷ ತುಂಬಿರಬೇಕು. ನೀವು ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳದಿದ್ದರೆ, ಎನ್‌ವಿಎಸ್‌ಪಿ (NVSP) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲಿ ಫಾರ್ಮ್ 6 ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಬಳಸಿ ನೋಂದಣಿ ಮಾಡಿಕೊಳ್ಳಬಹುದು. ವೈಯಕ್ತಿಕ ವಿವರಗಳ ಜೊತೆಗೆ ಆಧಾರ್ ಕಾರ್ಡ್ ಅಥವಾ ವಿಳಾಸದ ಪುರಾವೆಯನ್ನು ಅಪ್‌ಲೋಡ್ ಮಾಡುವ ಮೂಲಕ ಸುಲಭವಾಗಿ ಈ ಪ್ರಕ್ರಿಯೆ ಮುಗಿಸಬಹುದು. ಆನ್‌ಲೈನ್ ಸಾಧ್ಯವಾಗದಿದ್ದರೆ ನಿಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಫಾರ್ಮ್ 6 ಅನ್ನು ಸಲ್ಲಿಸುವ ಮೂಲಕ ಆಫ್‌ಲೈನ್‌ನಲ್ಲಿಯೂ ನೋಂದಾಯಿಸಿಕೊಳ್ಳಬಹುದು. ಗುರುತಿನ ಚೀಟಿ ಮರೆಯಬೇಡಿ ಮತದಾನ ಮಾಡಲು ಹೋಗುವಾಗ ಮತದಾರರ ಗುರುತಿನ ಚೀಟಿ (Voter ID) ಇರುವುದು ಕಡ್ಡಾಯ. ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಇಲ್ಲದಿದ್ದರೆ ಚಿಂತಿಸಬೇಡಿ. ಕೇಂದ್ರ ಚುನಾವಣಾ ಆಯೋಗವು ಅನುಮತಿಸಿರುವ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಭಾವಚಿತ್ರವಿರುವ ಬ್ಯಾಂಕ್ ಪಾಸ್‌ಬುಕ್‌ಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ನೀವು ಮತ ಚಲಾಯಿಸಬಹುದು. ಮತಗಟ್ಟೆಯಲ್ಲಿನ ಪ್ರಕ್ರಿಯೆ ಹೀಗಿರುತ್ತದೆ: ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿರುತ್ತದೆ. ಬಿಸಿಲಿನ ತಾಪ ಹೆಚ್ಚಾಗುವ ಮುನ್ನ ಅಂದರೆ ಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ನಿಮ್ಮ ಹಕ್ಕನ್ನು ಚಲಾಯಿಸುವುದು ಉತ್ತಮ. ಒಂದು ವೇಳೆ ನೀವು ಸಂಜೆ 6 ಗಂಟೆಗೆ ಸರತಿ ಸಾಲಿನಲ್ಲಿ ನಿಂತಿದ್ದರೂ ಸಹ, ಮತದಾನ ಮುಗಿಯುವವರೆಗೂ ನಿಮಗೆ ಅವಕಾಶ ನೀಡಲಾಗುತ್ತದೆ. ಎರಡೂ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳೆ ಚಲಾವಣೆಯಾಗುವ ಮತಗಳ ಎಣಿಕೆ ಮೇ 4 ರಂದು ನಡೆಯಲಿದ್ದು, ಅಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

