ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆ (b nagendra resignation) ನೀಡಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B. Y. Vijayendra) ಪ್ರತಿಕ್ರಿಯಿಸಿ, ನಾಗೇಂದ್ರ ಅವರ ರಾಜೀನಾಮೆಯಿಂದ ಬಿಜೆಪಿ ನಡೆಸಿದ ಹೋರಾಟಕ್ಕೆ ಒಂದು ಹಂತದಲ್ಲಿ ಯಶಸ್ಸು ದೊರೆತಿದೆ.
ಆದರೆ ಸೆಪ್ಟೆಂಬರ್ ೧ ರಿಂದ ಆರಂಭವಾಗುವ ನಮ್ಮ ಬೃಹತ್ ಪಾದಯಾತ್ರೆ ಎಂದಿನಂತೆ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಜನಕಾಳಜಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯದ ಹಿತದ ದೃಷ್ಟಿಯಿಂದ ನಾವು ಕೈಗೊಂಡ ಹೋರಾಟಕ್ಕೆ ಸಚಿವ ನಾಗೇಂದ್ರ ರಾಜೀನಾಮೆ ಸಲ್ಲಿಸುವ ಮೂಲಕ ಜಯ ದೊರಕಿದೆ. ನಾವು ಹೋರಾಟ ಆರಂಭಿಸಿದ್ದು ವ್ಯಕ್ತಿಗತ ವಿರೋಧಕ್ಕಾಗಿ ಅಲ್ಲ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಇತಿಹಾಸ ಕಂಡು ಕೇಳರಿಯದ ರೀತಿಯಲ್ಲಿ ಬ್ಯಾಂಕಿಗೆ ಕನ್ನ ಹಾಕಿ ಲೂಟಿ ಮಾಡಿದ ಪರಿಯನ್ನು ವಿರೋಧಿಸುವುದಕ್ಕಾಗಿ ಹಾಗೂ ಒಮ್ಮೆ ರಾಜೀನಾಮೆ ನೀಡಿದ್ದ ಆರೋಪಿತ ವ್ಯಕ್ತಿಯನ್ನು ಮತ್ತೆ ಸಚಿವರನ್ನಾಗಿ ಮಾಡಿ ಭ್ರಷ್ಟ ಹಾಗೂ ಲೂಟಿಕೋರತನವನ್ನು ಪೋಷಿಸುವ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ವಿರೋಧಿಸುವುದಕ್ಕಾಗಿ.
ಸದ್ಯ ಹೋರಾಟದ ಹಾದಿಯಲ್ಲಿ ಒಂದು ಹಂತ ತಲುಪಿ ಕಾಂಗ್ರೆಸ್ ಪಕ್ಷವನ್ನು ಮಣಿಸಿದ್ದೇವೆ. ವಿಧಾನಸೌಧದ ಉಭಯ ಸದನಗಳಲ್ಲಿಯೂ ನಮ್ಮ ಜೊತೆಗೆ ಕೈಜೋಡಿಸಿ ನಿಂತ ಜೆಡಿಎಸ್ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ರಾಜ್ಯಾದ್ಯಂತ ಅಹೋರಾತ್ರಿ ಧರಣಿ ನಡೆಸಿದ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಹೋರಾಟದ ನೈಜ ಕಾಳಜಿಯನ್ನು ಬೆಂಬಲಿಸಿದ ರಾಜ್ಯದ ಜನತೆಗೂ ಕೃತಜ್ಞತೆಗಳು ಎಂದಿದ್ದಾರೆ
ಈ ನಡುವೆ ಸೆಪ್ಟೆಂಬರ್ ೧ ರಿಂದ ಆರಂಭವಾಗುವ ನಮ್ಮ ಬೃಹತ್ ಪಾದಯಾತ್ರೆ ಎಂದಿನಂತೆ ಆರಂಭವಾಗಲಿದೆ. ಮಹರ್ಷಿ ವಾಲ್ಮೀಕಿ ನಿಗಮದ ಲೂಟಿಯಾದ ಹಣದಲ್ಲಿ ಭಾಗೀದಾರರಾದ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು, ತನಿಖೆ ಮುಂದುವರೆದಿರುವ ಈ ಹಂತದಲ್ಲಿ ನಾಗೇಂದ್ರ ಅವರೊಂದಿಗೆ ಕೈಜೋಡಿಸಿ ನಿಂತ ಕಾಂಗ್ರೆಸ್ ನ ಪ್ರಭಾವಿ ಶಕ್ತಿಗಳ ಅಸಲೀ ಮುಖವಾಡ ಕಳಚುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಸದ್ಯ ಲೂಟಿಯಾಗಿರುವ ಹಣ ಪೂರ್ಣಪ್ರಮಾಣದಲ್ಲಿ ವಾಲ್ಮೀಕಿ ನಿಗಮಕ್ಕೆ ವಾಪಾಸಾಗಬೇಕು. ಪರಿಶಿಷ್ಟ ಕಲ್ಯಾಣದ ಕಾರ್ಯ ಆರಂಭವಾಗಬೇಕು. ಬರಗಾಲದ ಬೇಗೆ ರಾಜ್ಯದ ಜನತೆಯನ್ನು ಭಾಧಿಸುತ್ತಿದೆ, ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಿದೆ, ಬಿತ್ತನೆ ಮಾಡಿ ಆಕಾಶದತ್ತ ಮುಖಮಾಡಿ ನಿಂತಿರುವ ರೈತರ ಗೋಳನ್ನು ಈ ಭಂಡ ಸರ್ಕಾರ ಕೇಳುತ್ತಿಲ್ಲ, ಬರ ಪರಿಹಾರ ಕಾರ್ಯ ಆರಂಭಿಸಿಲ್ಲ, ಬರದ ಬವಣೆಗೆ ಸಿಲುಕಿರುವ ಪ್ರದೇಶಗಳನ್ನು ಗುರುತಿಸಿ ʼಬರ ಪೀಡಿತ ಪ್ರದೇಶʼ ಎಂದು ಘೋಷಣೆ ಮಾಡಿಲ್ಲ. ಜನ ಜಾನುವಾರುಗಳ ಸ್ಥಿತಿ ಅಸಹನೀಯ ವಾಗುತ್ತಿದೆ ಎಂದಿದ್ದಾರೆ
ನಿರುದ್ಯೋಗಿ ಯುವಜನರ ಪಾಲಿಗೆ ನಿರಂತರ ಕಂಟಕಪ್ರಾಯವಾಗಿರುವ ಈ ಸರ್ಕಾರ ಲಕ್ಷಾಂತರ ಯುವಜನರ ನೇಮಕಾತಿಗೆ ಪ್ರಕ್ರಿಯೆಯನ್ನು ಇನ್ನೂ ಕೂಡ ಸರಿಯಾಗಿ ಆರಂಭಸಿಲ್ಲ, KPSC ನಡೆಸಿದ ಪಶು ವೈದ್ಯಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಿನ್ನಲೆಯ ಕರ್ಮಕಾಂಡ, ನೂರಾರು ಕೋಟಿಯ ಭ್ರಷ್ಟಾಚಾರ ರಾಜ್ಯದಿಂದಾಗಿ ಯುವಜನತೆ ಹತಾಶೆಯ ಅಂಚು ತಲುಪುವ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ. ಪಂಚಭಾಗ್ಯಗಳಿಗೆ ಇತಿಶ್ರೀ ಹಾಡಲು ಕುಂಟು ನೆಪಗಳ ಮಾರ್ಗಗಳನ್ನು ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಕಂಡುಕೊಂಡಿದೆ ಎಂದು ಹೇಳಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ಪಾದಯಾತ್ರೆ ಮುಂದುವರೆದು ಜನರ ದನಿಯಾಗಿ ಮೊಳಗಲಿದೆ. ಈ ಭ್ರಷ್ಟ ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಪಾದಯಾತ್ರೆಯ ಉದ್ದೇಶ ಕರ್ನಾಟಕ ರಾಜ್ಯದ ಜನತೆಯ ಪರವಾದ ಬೃಹತ್ ಆಂದೋಲನವಾಗಿದೆ ಎಂದರು.
ನಾಗೇಂದ್ರ ರಾಜೀನಾಮೆಯೊಂದಿಗೆ ವಾಲ್ಮೀಕಿ ನಿಗಮದ ಪ್ರಕರಣದ ರಾಜಕೀಯ ಹೋರಾಟಕ್ಕೆ ಹೊಸ ತಿರುವು ಸಿಕ್ಕಿದ್ದು, ಸೆಪ್ಟೆಂಬರ್ 1ರಿಂದ ಆರಂಭವಾಗಲಿರುವ ಬಿಜೆಪಿಯ ಪಾದಯಾತ್ರೆ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದಿದ್ದಾರೆ.

