ಬೆಂಗಳೂರು: ಬೆಂಗಳೂರಿನಲ್ಲಿ ತಮಿಳುನಾಡು (Tamil Nadu) ಮುಖ್ಯಮಂತ್ರಿ ವಿಜಯ್ (Vijay) ಮತ್ತು ಕರ್ನಾಟಕ (Karnataka) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನಡುವೆ ನಗರಾಡಳಿತ ಹಾಗೂ ಕಾವೇರಿ (Cauvery Water) ವಿಚಾರವಾಗಿ ಆಗಸ್ಟ್ 3ರಂದು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಈ ಮಹತ್ವದ ರಾಜಕೀಯ ಭೇಟಿಗಾಗಿ ವಿಧಾನಸೌಧದಲ್ಲಿ ಪೂರ್ವಸಿದ್ಧತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದಲ್ಲಿ ವಿಜಯ್ ಅಭಿನಯದ 'ಜನ ನಾಯಗನ್' (Jana Nayagan) ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಾವೇರಿ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಮಂಡ್ಯದ ಗುರುಶ್ರೀ ಹಾಗೂ ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರವನ್ನು ಕನ್ನಡಪರ ಮತ್ತು ರೈತ ಸಂಘಟನೆಗಳ ಪ್ರತಿಭಟನೆಯಿಂದಾಗಿ ಥಿಯೇಟರ್‌ಗಳಿಂದ ಎತ್ತಂಗಡಿ ಮಾಡಲಾಗಿದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಕಡೆಯಿಂದ ಸದಾ ವಿರೋಧ ವ್ಯಕ್ತವಾಗುತ್ತಿರುವಾಗ, ಅಲ್ಲಿನ ನಾಯಕರ ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಒಂದೆಡೆ ನಟನಾಗಿ ಕರ್ನಾಟಕದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿಜಯ್, ಈಗ ತಮಿಳುನಾಡಿನ ಸಿಎಂ ಆಗಿ ಸಾಂವಿಧಾನಿಕ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರು ಕರ್ನಾಟಕದ ಜೊತೆ ಸೌಹಾರ್ದಯುತ ಮಾತುಕತೆಗೆ ಮುಂದಾಗುತ್ತಿದ್ದರೂ, ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಅವರ ಚಿತ್ರಗಳ ವಿರುದ್ಧ ಬಹಿಷ್ಕಾರ ವ್ಯಕ್ತವಾಗುತ್ತಿರುವುದು ಅವರ ರಾಜಕೀಯ ಹಾಗೂ ಸಿನಿ ಪಯಣಕ್ಕೆ ಹೊಸ ಸವಾಲಾಗಿದೆ. ಆದರೆ, ಈ ಭೇಟಿಯ ಕುರಿತು ತಮಿಳುನಾಡು ಸರ್ಕಾರದಿಂದ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ಮಾತನಾಡಿ, ಮುಖ್ಯಮಂತ್ರಿ ವಿಜಯ್ ಅವರ ಬೆಂಗಳೂರು ಭೇಟಿಯ ಬಗ್ಗೆ ಇದುವರೆಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಹಾಗೂ ಸೂಕ್ತ ಸಮಯದಲ್ಲಿ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ ಆಗಸ್ಟ್ 3ರ ಸಂಧಾನ ಸಭೆ ನಡೆಯಲಿದೆಯೇ ಅಥವಾ ಕೇವಲ ವದಂತಿಯಾಗಿ ಉಳಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

