ಮಂಡ್ಯ: ಕಾವೇರಿ (Cauvery Water)ಕೊಳ್ಳದ ಕೆರೆ-ಕಟ್ಟೆಗಳು ಒಣಗಿ ನಿಂತಿರುವಾಗಲೇ, ನೆರೆ ರಾಜ್ಯ ತಮಿಳುನಾಡಿಗೆ (Tamil Nadu) ನಿತ್ಯ 3,500 ಕ್ಯುಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶ ಕಾವೇರಿ ಸೀಮೆಯಲ್ಲಿ ತೀವ್ರ ಆಕ್ರೋಶದ ಬಿರುಗಾಳಿ ಎಬ್ಬಿಸಿದೆ.
ಈ ಆದೇಶ ಖಂಡಿಸಿ ಭೂಮಿತಾಯಿ ಹೋರಾಟ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ನದಿಗಿಳಿದು ಮತ್ತು ರಸ್ತೆಯಲ್ಲಿ ಉರುಳಿ ಬೃಹತ್ ಪ್ರತಿಭಟನೆ (Protest) ನಡೆಸಿದವು. ಬೆಳೆ ಒಣಗುತ್ತಿದೆ, ಕುಡಿಯೋಕೂ ನೀರಿಲ್ಲ!': ನದಿಯಲ್ಲೇ ನಿಂತು ರೈತರ ಆಕ್ರೋಶ ಶ್ರೀರಂಗಪಟ್ಟಣದ ಪ್ರಸಿದ್ಧ ಸ್ನಾನಘಟ್ಟದ ಬಳಿ ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಅವರ ಮುಂದಾಳತ್ವದಲ್ಲಿ ನೂರಾರು ರೈತರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾವೇರಿ ನದಿಯ ನೀರಿನಲ್ಲೇ ನಿಂತು ಸಾಂಕೇತಿಕ ಧರಣಿ ನಡೆಸಿದರು. "ನಮ್ಮ ಜಲಾಶಯಗಳು ಖಾಲಿಯಾಗುತ್ತಿದ್ದು, ಬೆಳೆದು ನಿಂತ ಕಬ್ಬು ಕಣ್ಣೆದುರೇ ಒಣಗುತ್ತಿದೆ. ಭೀಕರ ಅಭಾವದಿಂದ ಮುಂದೆ ಕುಡಿಯುವ ನೀರಿಗೂ ಗಂಡಾಂತರ ಕಾಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಿ ಎನ್ನಲು ಪ್ರಾಧಿಕಾರಕ್ಕೆ ಮನಸಾದರೂ ಹೇಗೆ ಬಂತು?" ಎಂದು ರೈತರು ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿರೋ ತಮಿಳರಿಗೂ ಇದೇ ಕಾವೇರಿ ನೀರು': ಕಟು ಪ್ರಶ್ನೆ ಇತ್ತ ಕೆಆರ್‌ಎಸ್ ಆಣೆಕಟ್ಟೆಯ ಬಳಿ ಜಮಾಯಿಸಿದ ಕನ್ನಡಪರ ಹೋರಾಟಗಾರರು ರಸ್ತೆಯಲ್ಲಿ ಉರುಳುಸೇವೆ ನಡೆಸಿ ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೆರಾವ್ ಹಾಕಿದರು. ಬೆಂಗಳೂರಿನಲ್ಲೇ ಸುಮಾರು 30 ಲಕ್ಷ ತಮಿಳರು ನೆಲೆಸಿದ್ದು, ಅವರೂ ಇದೇ ಕಾವೇರಿ ನೀರನ್ನು ಬಳಸುತ್ತಿದ್ದಾರೆ. ಹೀಗಿರುವಾಗ ರಾಜ್ಯದ ರೈತರ ಹಿತವನ್ನು ಬಲಿ ಕೊಟ್ಟು ನೆರೆ ರಾಜ್ಯಕ್ಕೆ ನೀರು ಹರಿಸುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯದೆ 'ತಮಿಳುನಾಡಿಗೆ ನೀರು ಬಿಡುವುದಿಲ್ಲ' ಎಂದು ಶಪಥ ಮಾಡಬೇಕು. ಈ ಹೋರಾಟದಲ್ಲಿ ಇಡೀ ನಾಡಿನ ಜನತೆ ಹಾಗೂ ಸರ್ವಪಕ್ಷಗಳು ಸರ್ಕಾರದ ಜೊತೆಗಿದ್ದು, ರೈತರ ಹಿತ ಕಾಯಲು ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ಹೋರಾಟಗಾರರು ಆಗ್ರಹಿಸಿದರು.

