Dailyhunt
CHESS : ಭಾರತ ಮೂಲದ ಪೋರಿ ಈಗ ಇಂಗ್ಲೆಂಡ್​​​​ನ ನಂಬರ್ ಒನ್ ಚೆಸ್ ಆಟಗಾರ್ತಿ

CHESS : ಭಾರತ ಮೂಲದ ಪೋರಿ ಈಗ ಇಂಗ್ಲೆಂಡ್​​​​ನ ನಂಬರ್ ಒನ್ ಚೆಸ್ ಆಟಗಾರ್ತಿ

Navasamaja.com 2 weeks ago

ವದೆಹಲಿ: ಭಾರತೀಯ ಮೂಲದ ಪುಟ್ಟ ಬಾಲಕಿ ಬೋಧನಾ ಶಿವಾನಂದನ್ ಜಾಗತಿಕ ಚೆಸ್ (Chess) ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಕೇವಲ 11 ವರ್ಷದ ಪ್ರಾಯದಲ್ಲೇ ಇಂಗ್ಲೆಂಡ್‌ನ (England) ನಂಬರ್ 1 ಮಹಿಳಾ ಚೆಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (FIDE) ಇತ್ತೀಚೆಗೆ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಬೋಧನಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಬೋಧನಾ ಶಿವಾನಂದನ್ ಸದ್ಯ 2366 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. ಈ ಮೂಲಕ ಅವರು 4 ಬಾರಿ ಬ್ರಿಟಿಷ್ ಮಹಿಳಾ ಚಾಂಪಿಯನ್ ಆಗಿದ್ದ 25 ವರ್ಷದ ಅನುಭವಿ ಆಟಗಾರ್ತಿ ಲ್ಯಾನ್ ಯಾವೋ ಅವರನ್ನೇ ಹಿಂದಿಕ್ಕಿದ್ದಾರೆ.

ವಿಶೇಷವೆಂದರೆ, ಇದೇ ಮೊದಲ ಬಾರಿಗೆ ವಿಶ್ವದ ಟಾಪ್-100 ಮಹಿಳಾ ಚೆಸ್ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೋಧನಾ, ಜಾಗತಿಕವಾಗಿ 72ನೇ ರ‍್ಯಾಂಕ್ ಅಲಂಕರಿಸಿದ್ದಾರೆ. ಕಳೆದ ವರ್ಷವಷ್ಟೇ ಅವರು 'ಮಹಿಳಾ ಅಂತರರಾಷ್ಟ್ರೀಯ ಮಾಸ್ಟರ್' ಪದವಿಯನ್ನು ಅಲಂಕರಿಸಿದ್ದರು.

ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಬೋಧನಾ ಅವರ ಪೋಷಕರು 2007ರಲ್ಲಿ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದರು. ಬೋಧನಾ ಚೆಸ್ ಲೋಕಕ್ಕೆ ಕಾಲಿಟ್ಟ ಕಥೆಯೇ ಕುತೂಹಲಕಾರಿ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅವರ ತಂದೆ ಹಳೆಯ ಚೆಸ್ ಬೋರ್ಡ್ ಒಂದನ್ನು ಕಸಕ್ಕೆ ಬಿಸಾಡಲು ಮುಂದಾಗಿದ್ದರು.

ಆಗ ಅದನ್ನು ತಡೆದ ಪುಟ್ಟ ಬೋಧನಾ, ಕುತೂಹಲದಿಂದ ಆಟ ಕಲಿಯಲು ಶುರು ಮಾಡಿದರು. ಉತ್ತರ ಲಂಡನ್‌ನ ಹ್ಯಾರೋ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ, ಇಂದು ಇಡೀ ಇಂಗ್ಲೆಂಡ್ ಹೆಮ್ಮೆಪಡುವಂತೆ ಬೆಳೆದಿದ್ದಾರೆ.

ಮಾಜಿ ಪ್ರಧಾನಿ ರಿಷಿ ಸುನಕ್ ಅಭಿನಂದನೆ

ಬೋಧನಾ ಅವರ ಈ ಅಪ್ರತಿಮ ಸಾಧನೆಗೆ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಅನೇಕ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಸುನಕ್, ಇಂಗ್ಲೆಂಡ್‌ನ ನಂ.1 ಚೆಸ್ ಆಟಗಾರ್ತಿಯಾಗಿರುವ 11 ವರ್ಷದ ಬೋಧನಾ ಶಿವಾನಂದನ್ ಅವರಿಗೆ ಅಭಿನಂದನೆಗಳು. ಒಮ್ಮೆ ಡೌನಿಂಗ್ ಸ್ಟ್ರೀಟ್‌ನ ನನ್ನ ನಿವಾಸದ ಗಾರ್ಡನ್‌ನಲ್ಲಿ ನಾವಿಬ್ಬರೂ ಚೆಸ್ ಆಡಿದ್ದೆವು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ಒಟ್ಟಾರೆಯಾಗಿ, ಕೇವಲ ಹನ್ನೊಂದರ ಹರೆಯದಲ್ಲೇ ಚೆಸ್ ದಿಗ್ಗಜರನ್ನು ಸೋಲಿಸುತ್ತಿರುವ ಬೋಧನಾ, ಮುಂಬರುವ ದಿನಗಳಲ್ಲಿ ವಿಶ್ವ ಚಾಂಪಿಯನ್ ಆಗುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja