Dailyhunt Logo
  • Light mode
    Follow system
    Dark mode
    • Play Story
    • App Story
CJP : ಮುದುಕರೆಲ್ಲಾ ಆಶ್ರಮದಲ್ಲಿ ಬಿದ್ದಿರಬೇಕು - ಅಣ್ಣಾ ಹಜಾರೆ ಬಗ್ಗೆ ಜಿರಳೆ ಪಾರ್ಟಿ ಮುಖ್ಯಸ್ಥನ ಅವಹೇಳನ!

CJP : ಮುದುಕರೆಲ್ಲಾ ಆಶ್ರಮದಲ್ಲಿ ಬಿದ್ದಿರಬೇಕು - ಅಣ್ಣಾ ಹಜಾರೆ ಬಗ್ಗೆ ಜಿರಳೆ ಪಾರ್ಟಿ ಮುಖ್ಯಸ್ಥನ ಅವಹೇಳನ!

Navasamaja.com 1 week ago

ಹಾರಾಷ್ಟ್ರ : ಛತ್ರಪತಿ ಸಂಭಾಜಿನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಕರೂಚ್ ಜನತಾ ಪಾರ್ಟಿಯ (CJP) ಸಂಸ್ಥಾಪಕ ಅಧ್ಯಕ್ಷ ಅಭಿಜೀತ್ ದಿಪ್ಕೆ (Abhijit Dipke), ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (Anna Hazare) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಲ ಮಿಂಚಿಹೋದವರು ಸಾರ್ವಜನಿಕ ಮತ್ತು ರಾಜಕೀಯ ಜೀವನದಿಂದ ನಿವೃತ್ತಿ ಪಡೆದು ಆಶ್ರಮ ಸೇರಿ ವಿಶ್ರಾಂತಿ ಪಡೆಯುವುದು ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕಾಕರೂಚ್ ಜನತಾ ಪಾರ್ಟಿಯ ಸಾರ್ವಜನಿಕ ಚಳವಳಿಗೆ ಅಣ್ಣಾ ಹಜಾರೆ ಅವರು ಬೆಂಬಲ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಅಣ್ಣಾ ಅವರನ್ನು ಭೇಟಿಯಾಗುತ್ತೀರಾ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಅಭಿಜೀತ್ ದಿಪ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ತಾವೀಗ ಯಾರನ್ನೂ ಭೇಟಿಯಾಗುವ ಆಲೋಚನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಐವತ್ತು ಅಥವಾ ಅರವತ್ತು ವರ್ಷ ದಾಟಿದ ಹಿರಿಯರು ಯುವಕರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದರು. ವಯಸ್ಸಾದವರು ಸ್ವಯಂಪ್ರೇರಿತರಾಗಿ ಸಾಮಾಜಿಕ ಹಾಗೂ ರಾಜಕೀಯ ಚಳವಳಿಗಳಿಂದ ದೂರ ಸರಿಯಬೇಕು. ಈಗಾಗಲೇ ಜೀವನದಲ್ಲಿ ಎಲ್ಲವನ್ನೂ ಸಾಧಿಸಿರುವ ಹಿರಿಯರು ಇನ್ಮುಂದೆ ಆಶ್ರಮದಲ್ಲಿ ವಿಶ್ರಾಂತಿ ಪಡೆಯಬೇಕೇ ಹೊರತು, ಯುವ ಪೀಳಿಗೆಯ ಭವಿಷ್ಯದ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಬಾರದು ಎಂದು ದಿಪ್ಕೆ ಅಭಿಪ್ರಾಯಪಟ್ಟರು.

ಯುವಕರು ಮತ್ತು ವಿದ್ಯಾರ್ಥಿಗಳ ಭವಿಷ್ಯದ ದಾರಿಯನ್ನು ಯುವ ಪೀಳಿಗೆಯೇ ನಿರ್ಧರಿಸುತ್ತದೆ. ಯುವಕರು ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಮತ್ತು ಮುಂದಿನ ನಡೆ ಏನಿರಬೇಕು ಎಂಬುದನ್ನು ತಾವೇ ತೀರ್ಮಾನಿಸಿಕೊಳ್ಳಲು ಬಿಡಬೇಕು ಎಂದು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

ಅಭಿಜೀತ್ ದಿಪ್ಕೆ ಅವರ ಈ ಹೇಳಿಕೆಗೆ ಅಣ್ಣಾ ಹಜಾರೆ ಅವರ ರಾಳೇಗಣ ಸಿದ್ಧಿ ಕಚೇರಿಯ ಆಪ್ತರು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಭಿಜೀತ್ ದಿಪ್ಕೆ ಹೊಸ ಪಕ್ಷವನ್ನು ಕಟ್ಟಿದಾಗ ಯುವಕರು ಮುಂದೆ ಬಂದು ಧ್ವನಿ ಎತ್ತಬೇಕು ಎಂಬ ಆಶಯದೊಂದಿಗೆ ಅಣ್ಣಾ ಹಜಾರೆ ಬೆಂಬಲ ನೀಡಿದ್ದರು. ಆದರೆ ಈಗ ದಿಪ್ಕೆ ನೀಡಿರುವ ಹೇಳಿಕೆ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ ಎಂದು ಅಣ್ಣಾ ಆಪ್ತರೊಬ್ಬರು ತಿಳಿಸಿದ್ದಾರೆ. ಇಂತಹ ಸಣ್ಣ ಹೇಳಿಕೆಗಳಿಗೆ ಅಣ್ಣಾ ಹಜಾರೆ ಅವರು ಸ್ವತಃ ಪ್ರತಿಕ್ರಿಯಿಸುವುದಿಲ್ಲ, ಬದಲಿಗೆ ರಾಳೇಗಣ ಸಿದ್ಧಿಯ ಸ್ಥಳೀಯ ಕಾರ್ಯಕರ್ತರೇ ಇದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಮಾಹಿತಿ ಹಕ್ಕು (RTI) ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾದಾಗ, ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದರು. ಇದಕ್ಕೆ ಮಣಿದ ದೇವೇಂದ್ರ ಫಡ್ನವಿಸ್ ಸರ್ಕಾರ ತಿದ್ದುಪಡಿ ಪ್ರಸ್ತಾವನೆಗೆ ತಡೆ ನೀಡಿ ಹಿಂಜರಿದಿತ್ತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಯುವ ನಾಯಕ ಅಭಿಜೀತ್ ದಿಪ್ಕೆ ಹಿರಿಯ ಹೋರಾಟಗಾರನ ವಿರುದ್ಧ ಇಂತಹ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja