ಬೆಂಗಳೂರು : ಕರ್ನಾಟಕದ (Karnataka) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಡಿ.ಕೆ. ಶಿವಕುಮಾರ್ (Cm Dk Shivakumar) ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಮತ್ತು ಕಾಂಗ್ರೆಸ್ (Congress) ಪಕ್ಷದ ನಾಯಕರಿಗೆ ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ.
ಆಡಳಿತ ಯಂತ್ರ ಹಾಗೂ ಪಕ್ಷದ ಸಂಘಟನೆಯಲ್ಲಿ ಯಾವುದೇ ರೀತಿಯ ಬೇಜವಾಬ್ದಾರಿತನ ಅಥವಾ ಮೈಗಳ್ಳತನವನ್ನು ತಾವೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ನೇರವಾಗಿಯೇ ಎಚ್ಚರಿಸಿದ್ದಾರೆ. ಮುಖ್ಯಮಂತ್ರಿಯಾದ ಬೆನ್ನಲ್ಲೇ ಸಚಿವರ ಮಹತ್ವದ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು, "ನಾನು ಯಾವ ಮಂತ್ರಿಗಳನ್ನೂ ಸುಮ್ಮನೆ ಬಿಡುವುದಿಲ್ಲ. ಎಲ್ಲರೂ ದಿನದ 24 ಗಂಟೆಯೂ ಸಕ್ರಿಯವಾಗಿ ಕೆಲಸ ಮಾಡಬೇಕು" ಎಂದು ಖಡಕ್ ಆಗಿ ಹೇಳಿದ್ದಾರೆ. ಸಚಿವರು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ಎಲ್ಲಾ ಸಚಿವರು ಮತ್ತು ಶಾಸಕರು ತಮ್ಮ ವ್ಯಾಪ್ತಿಯ ಪ್ರತಿ ಜಿಲ್ಲೆಯಲ್ಲೂ ಕಡ್ಡಾಯವಾಗಿ ಪ್ರವಾಸ ಮಾಡಬೇಕು, ಸಾರ್ವಜನಿಕ ಸಭೆಗಳನ್ನು ನಡೆಸಿ ನೇರವಾಗಿ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಎಸ್‌ಐಆರ್ ನಿರ್ಲಕ್ಷಿಸಿದರೆ ಶಿಸ್ತು ಕ್ರಮದ ಬಿಸಿ! ಇದೇ ವೇಳೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ನೆನಪಿಸಿದ್ದಾರೆ. ಎಸ್‌ಐಆರ್ ವಿಚಾರದಲ್ಲಿ ಸದ್ಯ ದೊಡ್ಡ ಸಮಸ್ಯೆಯಿದೆ, ಇದನ್ನು ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಎಚ್ಚರಿಸಿರುವ ಮುಖ್ಯಮಂತ್ರಿಗಳು, ಚುನಾವಣಾ ವ್ಯವಸ್ಥೆಯ ಈ ಪ್ರಮುಖ ಪ್ರಕ್ರಿಯೆಯ ಕಡೆಗೆ ಎಲ್ಲಾ ನಾಯಕರು ಹೆಚ್ಚಿನ ಗಮನ ಹರಿಸಲೇಬೇಕು ಎಂದು ಕಠಿಣ ಸೂಚನೆ ನೀಡಿದ್ದಾರೆ. ಪಕ್ಷದ ಕೆಲಸಗಳಲ್ಲಿ ಬೇಜವಾಬ್ದಾರಿತನ ತೋರುವವರ ವಿರುದ್ಧ ತಾವೆಷ್ಟು ಕಠಿಣವಾಗಿ ನಡೆದುಕೊಳ್ಳುತ್ತೇವೆ ಎಂಬುದಕ್ಕೆ ಈ ಹಿಂದಿನ ಘಟನೆಯೊಂದನ್ನು ಮುಖ್ಯಮಂತ್ರಿಗಳು ನೆನಪಿಸಿದ್ದಾರೆ. ಈ ಹಿಂದೆ ನಡೆದಿದ್ದ ಎಸ್‌ಐಆರ್ ಮಹತ್ವದ ಸಭೆಗೆ ಗೈರು ಹಾಜರಾಗಿದ್ದ ಕೆಪಿಸಿಸಿ ಪದಾಧಿಕಾರಿಗಳ ವಿರುದ್ಧ ಡಿ.ಕೆ. ಶಿವಕುಮಾರ್ ಅವರು ಕಠಿಣ ಶಿಸ್ತು ಕ್ರಮ ಜರುಗಿಸುವ ಮೂಲಕ ಬಿಸಿ ಮುಟ್ಟಿಸಿದ್ದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಲಾ ಅವರು ಸಭೆಗೆ ಗೈರಾದ ನಾಯಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಆ ಸಭೆಗೆ ಬಾರದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದ ಒಟ್ಟು ಮೂವರು ಕೆಪಿಸಿಸಿ ಉಪಾಧ್ಯಕ್ಷರು ಮತ್ತು 29 ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದಲೇ ಮುಕ್ತಗೊಳಿಸಲಾಗಿತ್ತು. ಅದೇ ಶಿಸ್ತು ಈಗ ಸರ್ಕಾರದಲ್ಲೂ ಮುಂದುವರಿಯಲಿದ್ದು, ಸಚಿವರು ಅಲರ್ಟ್ ಆಗಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

