ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (State Politics) ಸಚಿವಾಕಾಂಕ್ಷಿಗಳ ಎದೆಬಡಿತ ಜೋರಾಗಿದ್ದು, ಕರ್ನಾಟಕ ಕಾಂಗ್ರೆಸ್ (Congress) ಸಚಿವ ಸಂಪುಟ ವಿಸ್ತರಣೆಯ (Cabinet Reshuffle) ಮಹೂರ್ತ ನಿಗದಿಯಾದಂತೆ ಕಾಣುತ್ತಿದೆ. ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ನಾಯಕರನ್ನು ಸಮಾಧಾನಪಡಿಸಲು ಮತ್ತು ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗಾಗಿ ರಾಷ್ಟ್ರ ರಾಜಧಾನಿಗೆ ಹೊರಡಲು ಸಜ್ಜಾಗಿದ್ದಾರೆ.
ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಬರುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನದ ಕಸರತ್ತು ಗರಿಗೆದರಿದೆ. ಸಂಭಾವ್ಯ ನೂತನ ಸಚಿವರ ಸಿದ್ಧಪಡಿಸಿದ ಪಟ್ಟಿಯೊಂದಿಗೆ ಜುಲೈ 5ರಂದು ಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ತಲುಪಲಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಅಲ್ಲಿಗೆ ತೆರಳಲಿದ್ದು, ಜುಲೈ 6 ಮತ್ತು 7ರಂದು ಎಐಸಿಸಿ ವರಿಷ್ಠರ ಸಮ್ಮುಖದಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದೆ. ಹೈಕಮಾಂಡ್ ಅಂತಿಮ ಒಪ್ಪಿಗೆ ನೀಡಿದರೆ ಜುಲೈ 10 ರಿಂದ 12ರ ಅವಧಿಯಲ್ಲಿ ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ ಎಂದು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಸದ್ಯ ಸಚಿವ ಗಾದಿಗೇರಲು ಕಾದು ಕುಳಿತಿರುವ ಪ್ರಮುಖ ಶಾಸಕರ ವಲಯವಾರು ವಿವರ ಇಲ್ಲಿದೆ. ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಿಂದ ಲಿಂಗಾಯತ ಕೋಟಾದಡಿ ಬೆಳಗಾವಿಯ ಲಕ್ಷ್ಮಣ ಸವದಿ ಹೆಸರು ಮುಂಚೂಣಿಯಲ್ಲಿದ್ದರೆ, ಧಾರವಾಡ ಭಾಗದಿಂದ ಪ್ರಸಾದ್ ಅಬ್ಬಯ್ಯ ರೇಸ್ನಲ್ಲಿದ್ದಾರೆ. ವಿಜಯಪುರದಿಂದ ಯಶವಂತರಾಯ ಪಾಟೀಲ ಅಥವಾ ಅಪ್ಪಾಜಿ ನಾಡಗೌಡ ಅವರ ನಡುವೆ ಪೈಪೋಟಿ ನಡೆದಿದೆ. ಇನ್ನು ಅಲ್ಪಸಂಖ್ಯಾತ ಕೋಟಾದಡಿ ಸಲೀಂ ಅಹ್ಮದ್ ಹೆಸರು ಚರ್ಚೆಯಲ್ಲಿದೆ. ಮಧ್ಯ ಕರ್ನಾಟಕ ಭಾಗದಿಂದ ಬಳ್ಳಾರಿಯ ನಾಗೇಂದ್ರ, ಕೊಪ್ಪಳದ ಬಸವರಾಜ ರಾಯರೆಡ್ಡಿ, ಹಾವೇರಿಯ ರುದ್ರಪ್ಪ ಲಮಾಣಿ ಹಾಗೂ ಶಿವಮೊಗ್ಗದ ಬೇಳೂರು ಗೋಪಾಲಕೃಷ್ಣ ಅವರ ಹೆಸರುಗಳು ಕೇಳಿಬರುತ್ತಿವೆ. ಬಯಲುಸೀಮೆಯ ಚಿತ್ರದುರ್ಗದಿಂದ ರಘುಮೂರ್ತಿ ಹಾಗೂ ದಾವಣಗೆರೆಯಿಂದ ಎಸ್.ಎಸ್. ಮಲ್ಲಿಕಾರ್ಜುನ್ ಅಥವಾ ಡಿ.ಜಿ. ಶಾಂತನಗೌಡ ಅವರ ಹೆಸರುಗಳು ಲಭ್ಯವಿವೆ. ಹಳೆಯ ಮೈಸೂರು ಪ್ರಾಂತ್ಯದ ತುಮಕೂರಿನಿಂದ ಶ್ರೀನಿವಾಸ್ (ವಾಸು), ಹಾಸನದಿಂದ ಕಡು ಒಕ್ಕಲಿಗ ನಾಯಕ ಕೆ.ಎಂ. ಶಿವಲಿಂಗೇಗೌಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಮಂಡ್ಯ ಜಿಲ್ಲೆಯಿಂದ ಎನ್. ಚಲುವರಾಯಸ್ವಾಮಿ ಮತ್ತು ಪಿ.ಎಂ. ನರೇಂದ್ರಸ್ವಾಮಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಚಾಮರಾಜನಗರದಿಂದ ಪುಟ್ಟರಂಗಶೆಟ್ಟಿ ಹಾಗೂ ಕೋಲಾರ ಭಾಗದಿಂದ ಶರತ್ ಬಚ್ಚೇಗೌಡ ಅಥವಾ ಕೆ.ವೈ. ನಂಜೇಗೌಡ ಅವರ ಹೆಸರುಗಳು ವರಿಷ್ಠರ ಮುಂದಿವೆ. ಇನ್ನು ರಾಜಧಾನಿ ಬೆಂಗಳೂರಿನಿಂದ ಬಿ.ಝೆಡ್. ಜಮೀರ್ ಅಹಮದ್ ಖಾನ್, ರಿಜ್ವಾನ್ ಅರ್ಷದ್ ಅಥವಾ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್ ಮತ್ತು ಎಂ. ಕೃಷ್ಣಪ್ಪ ಅವರ ಹೆಸರುಗಳು ಸದ್ದು ಮಾಡುತ್ತಿವೆ. ಕರಾವಳಿ ಮತ್ತು ಮಲೆನಾಡು ಭಾಗದಿಂದ ಚಿಕ್ಕಮಗಳೂರಿನ ತರೀಕೆರೆ ಶ್ರೀನಿವಾಸ್ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಮಂಕಾಳ ವೈದ್ಯ ಅಥವಾ ಆರ್.ವಿ. ದೇಶಪಾಂಡೆ ಹೆಸರುಗಳು ಮುಂಚೂಣಿಯಲ್ಲಿವೆ. ಇದೇ ವೇಳೆ ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಸರ್ಜರಿ ನಡೆಯಲಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಎಲ್ಲಾ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ಹಳೇ ನೇಮಕಾತಿಯನ್ನು ರದ್ದುಗೊಳಿಸಲು ಸಿದ್ಧತೆ ನಡೆದಿದೆ. ದೆಹಲಿ ಪ್ರವಾಸ ಮುಗಿದ ತಕ್ಷಣವೇ ಈ ಆದೇಶ ಹೊರಬೀಳುವ ಸಾಧ್ಯತೆಯಿದೆ. ಸಚಿವ ಸ್ಥಾನ ಸಿಗದ ಹಿರಿಯ ಶಾಸಕರು ಮತ್ತು ಪಕ್ಷಕ್ಕಾಗಿ ರಾತ್ರಿ ಹಗಲು ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಪ್ರಮುಖ ನಿಗಮ-ಮಂಡಳಿಗಳ ಜವಾಬ್ದಾರಿ ನೀಡಿ ತಣ್ಣಗಾಗಿಸಲು ಹೈಕಮಾಂಡ್ ಮತ್ತು ರಾಜ್ಯ ನಾಯಕರು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

