Dailyhunt Logo
  • Light mode
    Follow system
    Dark mode
    • Play Story
    • App Story
CONGRESS: ಪಕ್ಷದಲ್ಲಿ ಸಿದ್ದರಾಮಯ್ಯ ಮೂಲೆಗುಂಪು ಆರೋಪಕ್ಕೆ ಪುತ್ರ ಯತೀಂದ್ರ ತಿರುಗೇಟು

CONGRESS: ಪಕ್ಷದಲ್ಲಿ ಸಿದ್ದರಾಮಯ್ಯ ಮೂಲೆಗುಂಪು ಆರೋಪಕ್ಕೆ ಪುತ್ರ ಯತೀಂದ್ರ ತಿರುಗೇಟು

Navasamaja.com 2 weeks ago

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳುವ ತನಕ ಅವರನ್ನು ಅತಿಯಾಗಿ ಓಲೈಸಿದ ಕಾಂಗ್ರೆಸ್ (Congress) ನಾಯಕರು, ಈಗ ಅವರನ್ನು ಕಾವೇರಿ ನಿವಾಸದಲ್ಲಿ ಕೂಡಿಹಾಕಿ ಸಂಪೂರ್ಣವಾಗಿ ಮೂಲೆಗುಂಪು ಮಾಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಶ್ರೀರಾಮುಲು ಆರೋಪ ಮಾಡಿದ್ದಾರೆ.

ಆದರೆ, ಶ್ರೀರಾಮುಲು ಅವರ ಈ ಆರೋಪವನ್ನು ಸಿದ್ದರಾಮಯ್ಯ ಅವರ ಪುತ್ರ ಹಾಗೂ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಳ್ಳಿಹಾಕಿದ್ದು, ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರೆ, ಇತ್ತ ಕಾಂಗ್ರೆಸ್ ಭವನದಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ವಿಪಕ್ಷಗಳ ಟೀಕೆಗಳಿಗೆ ಉತ್ತರಿಸಿದ್ದಾರೆ.

ಸಿದ್ದರಾಮಯ್ಯ ಈಗ ಲೆಕ್ಕಕ್ಕಿಲ್ಲದ ಮನುಷ್ಯ ಎಂದ ಶ್ರೀರಾಮುಲು
ಕಾಂಗ್ರೆಸ್ ಇತಿಹಾಸವನ್ನು ನೆನಪಿಸಿದ ಶ್ರೀರಾಮುಲು, ಹಿಂದೆ ದಿ. ದೇವರಾಜ ಅರಸು ಅವರಿಗೆ ಕಾಂಗ್ರೆಸ್ ಹೇಗೆ ದ್ರೋಹ ಮತ್ತು ಮೋಸ ಮಾಡಿತ್ತೋ, ಅದೇ ಮಾದರಿಯಲ್ಲಿ ಈಗ ಸಿದ್ದರಾಮಯ್ಯ ಅವರಿಗೂ ಮಾಡಿದೆ. 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ಆಶೀರ್ವಾದದಿಂದ. ಆದರೆ, ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮುಗಿದ ಮೇಲೆ ಸಿದ್ದರಾಮಯ್ಯ ಅವರನ್ನು ಕೇವಲ ಲೆಕ್ಕಕ್ಕಿಲ್ಲದ ಮನುಷ್ಯನಂತೆ ನಡೆಸಿಕೊಳ್ಳಲಾಗುತ್ತಿದೆ. ಸರ್ಕಾರದ ಒಂದೇ ಒಂದು ಕಾರ್ಯಕ್ರಮಕ್ಕೂ ಅವರನ್ನು ಕರೆಯುತ್ತಿಲ್ಲ. ಸಿಎಂ ಮನಸ್ಸು ಮಾಡಿದ್ದರೆ ನಾಡಪ್ರಭು ಕೆಂಪೇಗೌಡ ಜಯಂತಿಯ ಫ್ಲೆಕ್ಸ್ ಹಾಗೂ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಾಕಿಸಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಇಂತಹ ನೃತಘ್ನ ಜನರಿಗೆ 2028ರ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.

ಯತೀಂದ್ರ ವಿರುದ್ಧ ಕಾಂಗ್ರೆಸ್‌ನಲ್ಲೇ ಪಿತೂರಿ!
ಮುಂದುವರಿದು ಮಾತನಾಡಿದ ಶ್ರೀರಾಮುಲು, ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಖಾತೆ ನೀಡಿರುವುದರ ವಿರುದ್ಧ ಕಾಂಗ್ರೆಸ್ ಒಳಗಡೆಯೇ ಪಿತೂರಿ ಮತ್ತು ಅಸಮಾಧಾನ ಹೊಗೆಯಾಡುತ್ತಿದೆ ಎಂದರು. ಮುಡಾ (MUDA) ಸೈಟು ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಯತೀಂದ್ರ ಅವರ ಕುಟುಂಬದ ಮೇಲೆಯೇ ಆರೋಪಗಳಿವೆ. ಹೀಗಿರುವಾಗ ಹಗರಣದ ತನಿಖೆ ನಡೆಯುತ್ತಿರುವ ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿಯನ್ನೇ ಯತೀಂದ್ರ ಅವರಿಗೆ ನೀಡಿರುವುದು ಸರಿಯಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಂತೆ ಯತೀಂದ್ರ ಅವರು ತಕ್ಷಣವೇ ಆ ಖಾತೆಯನ್ನು ಬಿಡಬೇಕು. ಈ ಬಗ್ಗೆ ಕಾಂಗ್ರೆಸ್‌ನ ಒಂದು ಪ್ರಭಾವಿ ಗುಂಪೇ ಚರ್ಚೆ ಆರಂಭಿಸಿರುವುದರಿಂದ ಪಕ್ಷದೊಳಗೆ ದೊಡ್ಡ ಬೆಳವಣಿಗೆ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನಮ್ಮ ಸಿಎಂಗೆ ಇಡೀ ರಾಜ್ಯ ಬೇಡ, ಕೇವಲ ಬೆಂಗಳೂರು ಅಷ್ಟೇ ಸಾಕಾಗಿದೆ. ಸಿಎಂ ಆಗಿ ಒಂದು ತಿಂಗಳಾದರೂ ಅವರು ಬೆಂಗಳೂರು ಬಿಟ್ಟು ಹೊರಬರುತ್ತಿಲ್ಲ. ರಾಜ್ಯದಾದ್ಯಂತ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಜನ ತತ್ತರಿಸುತ್ತಿದ್ದರೆ, ಇವರು ಕೇವಲ ಕನಕೋತ್ಸವ ಆಚರಣೆಯಲ್ಲಿ ಮುಳುಗಿದ್ದಾರೆ. ಕಂದಾಯ ಸಚಿವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಈ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಫೋಟೋ ಹಾಕದಿದ್ದರೆ ಕಡೆಗಣಿಸಿದಂತೆ ಅಲ್ಲ
ಶ್ರೀರಾಮುಲು ಅವರ ಈ ಎಲ್ಲಾ ಆರೋಪಗಳನ್ನು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಯಾವುದೋ ಕೆಲವು ಸಣ್ಣಪುಟ್ಟ ಸರ್ಕಾರಿ ಕಾರ್ಯಕ್ರಮಗಳು ಅಥವಾ ಜಯಂತಿಗಳ ಆಮಂತ್ರಣ ಪತ್ರಿಕೆ, ಬ್ಯಾನರ್‌ಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಮುದ್ರಿಸಿಲ್ಲ ಎಂದ ತಕ್ಷಣ ಅವರನ್ನು ಪಕ್ಷ ಅಥವಾ ಸರ್ಕಾರ ಕಡೆಗಣಿಸುತ್ತಿದೆ ಎಂದು ಅರ್ಥೈಸಿಕೊಳ್ಳುವುದು ತಪ್ಪು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಲ್ಲಿ ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಮುಡಾ ಹಗರಣದ ಹಿನ್ನೆಲೆಯಲ್ಲಿ ತಮಗೆ ನಗರಾಭಿವೃದ್ಧಿ ಖಾತೆ ನೀಡಿರುವುದು ತಪ್ಪು ಎಂಬ ಟೀಕೆಗೆ, ಈಗಾಗಲೇ ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ತನಿಖಾ ವರದಿಯನ್ನು ಕೊಟ್ಟಿದ್ದಾರೆ ಎಂದು ಪುನರುಚ್ಚರಿಸಿದರು.

ಎಸ್‌ಐಆರ್ (SIR) ದೂರುಗಳೆಲ್ಲಾ ರಾಜಕೀಯ ಪ್ರೇರಿತ
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೂ ಯತೀಂದ್ರ ಉತ್ತರಿಸಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಅಥವಾ ಅಧಿಕಾರ ದುರುಪಯೋಗ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಈ ಇಡೀ ಪ್ರಕ್ರಿಯೆಯು ಸ್ವಾಯತ್ತ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಉಸ್ತುವಾರಿಯಲ್ಲೇ ನಡೆಯುತ್ತದೆ. ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್‌ನವರು ಸರ್ಕಾರದ ಮೇಲೆ ವಿನಾಕಾರಣ ಗೂಬೆ ಕೂರಿಸಲು ಈ ರೀತಿ ಸುಳ್ಳು ದೂರುಗಳನ್ನು ನೀಡುತ್ತಿದ್ದಾರೆ. ಇವೆಲ್ಲವೂ ಕೇವಲ ರಾಜಕೀಯ ಪ್ರೇರಿತ ಟೀಕೆಗಳಾಗಿದ್ದು, ಇವುಗಳಿಗೆ ಯಾವುದೇ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಸಚಿವರು ಲೇವಡಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja