ಕೊಪ್ಪಳ: ಬಿಜೆಪಿ (Bjp) ಮತ್ತು ಆರ್‌ಎಸ್‌ಎಸ್ (RSS) ನಾಯಕರು ಹಿಂದುತ್ವದ ಮುಖವಾಡ ಧರಿಸಿದ ಖದೀಮರು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Sharanprakashpatil) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಸರಿ ಪಡೆಯ ವಿರುದ್ಧ ಕಟು ಶಬ್ದಗಳಿಂದ ವೀಕ್ಷಕರ ಗಮನ ಸೆಳೆದಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ, ದೇವರ ಹೆಸರಿನಲ್ಲಿ ಜನರಿಂದ ವಸೂಲಿ ಮಾಡಿದ ಈ ನಿಧಿಯ ಲೆಕ್ಕ ಎಲ್ಲಿದೆ ಎಂದು ಸಚಿವರು ಪ್ರಶ್ನಿಸಿದ್ದಾರೆ. ಶ್ರೀರಾಮನ ಹೆಸರಿನಲ್ಲಿ ಸಂಗ್ರಹವಾದ ಸಾರ್ವಜನಿಕರ ಹಣದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಸಚಿವರ ಈ ವಿವಾದಾತ್ಮಕ ಮತ್ತು ತೀಕ್ಷ್ಣ ಹೇಳಿಕೆಗಳು ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಸದಾ ನಡೆಯುವ ಧಾರ್ಮಿಕ ಮತ್ತು ರಾಜಕೀಯ ಕೆಸರೆರಚಾಟಕ್ಕೆ ಈ ಘಟನೆ ಹೊಸ ಕಿಡಿ ಹೊತ್ತಿಸಿದ್ದು, ಉಭಯ ಪಕ್ಷಗಳ ನಡುವೆ ವಾಗ್ದಾಳಿ ತೀವ್ರಗೊಂಡಿದೆ.
ಇತಿಹಾಸದಲ್ಲಿ ಭಾರತದ ಪ್ರಸಿದ್ಧ ದೇವಸ್ಥಾನಗಳ ಮೇಲೆ ದಾಳಿ ನಡೆಸಿ, ಲೂಟಿ ಮಾಡಿದ ಮೊಹಮ್ಮದ್ ಘಜ್ನಿ ಮತ್ತು ಮೊಹಮ್ಮದ್ ಘೋರಿಗೆ ಬಿಜೆಪಿ ನಾಯಕರನ್ನು ಹೋಲಿಸಿದ್ದಾರೆ. ಧರ್ಮ ಮತ್ತು ದೇವರನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದ್ದಾರೆ.

