ಕಲಬುರಗಿ : ನಾಲ್ಕು ವರ್ಷದ ಮಗನನ್ನು ಕೊಲೆ (Crime) ಮಾಡಿ ಡ್ಯಾಂಗೆ ಎಸೆದ ಆರೋಪದಡಿ ತಂದೆ ಸೋಮರಾವ್ ಹೂಗಾರ್‌ನನ್ನು ಚಿಂಚೋಳಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ (Kalburgi) ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸಿರಗುಂಡಗಿ ಗ್ರಾಮದಲ್ಲಿ ನಡೆದಿದ್ದ ಈ ಘಟನೆ ಇದೀಗ ಭಾರೀ ಆಘಾತಕ್ಕೆ ಕಾರಣವಾಗಿದೆ.
ಮೃತ ಬಾಲಕನನ್ನು ನಾಲ್ಕು ವರ್ಷದ ಗುಂಡೇಶ ಎಂದು ಗುರುತಿಸಲಾಗಿದೆ. ಪತಿ-ಪತ್ನಿ ನಡುವೆ ಕೌಟುಂಬಿಕ ಕಲಹವಿದ್ದ ಹಿನ್ನೆಲೆಯಲ್ಲಿ ಬಾಲಕನ ತಾಯಿ ಕಲ್ಪನಾ ತನ್ನ ಮಗನೊಂದಿಗೆ ತವರು ಮನೆಯಲ್ಲಿ ಇದ್ದರು ಎನ್ನಲಾಗಿದೆ. ಸೋಮವಾರ ಕಲ್ಪನಾ ಅವರ ತವರು ಮನೆಗೆ ಬಂದ ಸೋಮರಾವ್, ಮಗನೊಂದಿಗೆ ಕೆಲಕಾಲ ಆಟವಾಡಿದ್ದಾನೆ. ಬಳಿಕ ಯಾರಿಗೂ ಮಾಹಿತಿ ನೀಡದೆ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಮಗನನ್ನು ಪತಿ ಕರೆದುಕೊಂಡು ಹೋದ ವಿಚಾರ ತಿಳಿದ ಕಲ್ಪನಾ, ತಕ್ಷಣ ಚಿಂಚೋಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸೋಮರಾವ್ ಮಗನನ್ನು ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಯೋಜನೆಯ ನಾಗರಾಳ ಡ್ಯಾಂಗೆ ಕರೆದೊಯ್ದು ನೀರಿಗೆ ಎಸೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಗನನ್ನು ಕರೆದುಕೊಂಡು ಹೋದ ಬಳಿಕ ಏನಾಯಿತು, ಕೃತ್ಯಕ್ಕೆ ನಿಖರ ಕಾರಣವೇನು ಹಾಗೂ ಬಾಲಕನ ಶವವನ್ನು ಯಾವ ಸ್ಥಳದಲ್ಲಿ ಎಸೆಯಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

