Dailyhunt Logo
  • Light mode
    Follow system
    Dark mode
    • Play Story
    • App Story
CRIME : 8 ರಾಜ್ಯ, 7ಕ್ಕೂ ಹೆಚ್ಚು ಹೆಸರು - 25 ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಅರೆಸ್ಟ್

CRIME : 8 ರಾಜ್ಯ, 7ಕ್ಕೂ ಹೆಚ್ಚು ಹೆಸರು - 25 ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಅರೆಸ್ಟ್

Navasamaja.com 1 week ago

ಮಂಗಳೂರು: ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು, ಅಧಿಕಾರಿಯ ಸೋಗಿನಲ್ಲಿ ಜನರಿಗೆ ವಂಚನೆ (Crime), ಪ್ರಕರಣ ದಾಖಲಾದ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊಸ ಗುರುತು… ಹೀಗೆ ಹಲವು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು (CCB Police) ಕೊನೆಗೂ ಬಂಧಿಸಿದ್ದಾರೆ.

ಕೇರಳದ (Kerala) ಕಣ್ಣೂರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸ್ಯಾಮ್ ಪೀಟರ್ (64) ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಡ್ಯಾನಿ ಥರಕ್ಕನ್, ಆಂಥೋನಿ ಸೇರಿದಂತೆ ಹಲವು ಹೆಸರುಗಳಿಂದ ಗುರುತಿಸಿಕೊಂಡಿದ್ದ ಸ್ಯಾಮ್ ಪೀಟರ್, ತಾನು ರಾಷ್ಟ್ರೀಯ ತನಿಖಾ ಸಂಸ್ಥೆ ಅಥವಾ ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ (NCIB)ನ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಸಂಪರ್ಕವಿದೆ ಎಂದು ಹೇಳಿ ಹಣಕಾಸು ವಿವಾದ, ಬ್ಯಾಂಕ್ ವಂಚನೆ ಮತ್ತು ತೆರಿಗೆ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡುತ್ತಿದ್ದ ಎನ್ನಲಾಗಿದೆ.

ಈ ಮೂಲಕ ಹಣ ಪಡೆದು ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಆರೋಪ ಆತನ ಮೇಲಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲೂ ಇದೇ ರೀತಿಯ ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದಿದೆ.

ಪೊಲೀಸ್ ದಾಖಲೆಗಳ ಪ್ರಕಾರ, ಮಂಗಳೂರು, ಉಳ್ಳಾಲ, ಕೊಣಾಜೆ, ಉಡುಪಿ, ಚಿಕ್ಕಬಳ್ಳಾಪುರ, ಕುಶಾಲನಗರ ಹಾಗೂ ಬೆಂಗಳೂರಿನಲ್ಲಿ ಆತನ ವಿರುದ್ಧ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲೂ ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು ಎನ್ನಲಾಗಿದೆ. ರಾಹುಲ್ ಪೀಟರ್, ರಾಜೇಶ್ ರಾಬಿನ್ಸನ್, ರಾಯ್ ಜೇಕಬ್, ರಾಬಿನ್ ರಿಚರ್ಡ್ಸನ್, ಆಂಥೋನಿ ಫ್ರಾನ್ಸಿಸ್, ಶರೋನ್ ಫ್ರಾನ್ಸಿಸ್ ಮತ್ತು ಡ್ಯಾನಿ ಥರಕ್ಕನ್ ಸೇರಿದಂತೆ ಹಲವು ಹೆಸರುಗಳನ್ನು ಬಳಸುತ್ತಿದ್ದ ಆತ, ಒಂದು ಪ್ರಕರಣದಲ್ಲಿ ಪೊಲೀಸರು ಬೆನ್ನಟ್ಟಲು ಆರಂಭಿಸಿದರೆ ಮತ್ತೊಂದು ಹೆಸರಿನಲ್ಲಿ ಬೇರೆ ಪ್ರದೇಶಕ್ಕೆ ತೆರಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದಕ್ಕೂ ಮುನ್ನ 2019ರಲ್ಲಿ ಮಂಗಳೂರು ಪೂರ್ವ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ 2023ರ ಸೆಪ್ಟೆಂಬರ್‌ನಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದ. ಬಳಿಕ ಆತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಕಣ್ಣೂರಿನಲ್ಲಿ ಇರುವುದನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಸ್ಯಾಮ್ ಪೀಟರ್ ವಿರುದ್ಧದ ಪ್ರಕರಣಗಳು ಹೊಸದಲ್ಲ. ಆತ ಬಳಸಿದ್ದ ಒಂದು ಹೆಸರಿನ ಆಧಾರದ ಮೇಲೆ 2001ರಲ್ಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಆತನ ಬಂಧನದ ಹಿನ್ನೆಲೆಯಲ್ಲಿ ನೋಟಿಸ್ ಮುಚ್ಚಲಾಗಿತ್ತು. ಆದರೆ ಅದಾದ ಬಳಿಕವೂ ಆರೋಪಿ ತನ್ನ ವಂಚನೆ ಚಟುವಟಿಕೆಗಳನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ವಿವಿಧ ರಾಜ್ಯಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ತಂಡ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಕಣ್ಣೂರಿನಲ್ಲಿ ಬಂಧಿಸಲಾದ ಸ್ಯಾಮ್ ಪೀಟರ್‌ನನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಮಂಗಳೂರು ಪೂರ್ವ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja