ನಿಜಾಮಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನ್ಯಾಲ್ಕಲ್ ಗ್ರಾಮದಲ್ಲಿ ಪತ್ನಿಯೇ ತನ್ನ ಪ್ರೇಮಿ ಹಾಗೂ ಮತ್ತೊಬ್ಬಾತನ ಜೊತೆ ಸೇರಿ ಪತಿಯನ್ನು (Crime) ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕಟ್ಟಡದ ಮೇಲಿಂದ ತಳ್ಳಿ ಕೊಲ್ಲಲು ಯತ್ನಿಸಿ ಅದು ವಿಫಲವಾದಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿಗೆ ನರ್ಸ್ ಆಗಿದ್ದ ಪತ್ನಿಯೇ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಪ್ರಾಣ ತೆಗೆದಿದ್ದಾಳೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಯೋಜನೆಯ ಪ್ರಕಾರ ಜೂನ್ 29 ರಂದು ಸಂಧ್ಯಾ ಸೂಚನೆ ಮೇರೆಗೆ ಬಂಟಿ, ಪ್ರಶಾಂತ್‌ನನ್ನು ಕರೆದುಕೊಂಡು ಹೋಗಿ ಫುಲ್ ಕುಡಿಸಿದ್ದಾನೆ. ಬಳಿಕ ಇಬ್ಬರೂ ಮದ್ಯದ ಮತ್ತಿನಲ್ಲಿ ಕಟ್ಟಡದ ಮಹಡಿ ಮೇಲಕ್ಕೆ ಹೋದಾಗ ಜಗಳ ಶುರುವಾಗಿದೆ. ಈ ವೇಳೆ ಅಲ್ಲಿಗೆ ಬಂದ ಸಂಧ್ಯಾ ಮತ್ತು ಬಂಟಿ ಇಬ್ಬರೂ ಸೇರಿ ಪ್ರಶಾಂತ್‌ನನ್ನು ಮಹಡಿಯಿಂದ ಕೆಳಗೆ ತಳ್ಳಿದ್ದಾರೆ. ಆದರೆ ಅದೃಷ್ಟವಶಾತ್ ತೀವ್ರ ಗಾಯಗಳ ನಡುವೆಯೂ ಪ್ರಶಾಂತ್ ಬದುಕುಳಿದಿದ್ದ. ತಕ್ಷಣ ಆತನನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ, ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೊದಲ ಪ್ಲಾನ್ ಫ್ಲಾಪ್ ಆಗುತ್ತಿದ್ದಂತೆ ಕಂಗಾಲಾದ ಸಂಧ್ಯಾ, ಜೂನ್ 30 ರಂದು ತನ್ನ ನರ್ಸಿಂಗ್ ಜ್ಞಾನವನ್ನು ಬಳಸಿಕೊಂಡು ಎರಡನೇ ಬಾರಿ ಮರಣಾಂತಿಕ ದಾಳಿ ನಡೆಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿ ಪ್ರಶಾಂತ್‌ನ ಕೈಗೆ ಹಾಕಲಾಗಿದ್ದ ಕ್ಯಾನುಲಾ (ಔಷಧಿ ನೀಡುವ ಟ್ಯೂಬ್) ಮೂಲಕ ಆಕೆ ಟಾಯ್ಲೆಟ್ ಕ್ಲೀನರ್ ಮತ್ತು ಇತರ ವಿಷಕಾರಿ ದ್ರವಗಳನ್ನು ದೇಹದೊಳಗೆ ಇಂಜೆಕ್ಟ್ ಮಾಡಿದ್ದಾಳೆ. ಇದರ ಪರಿಣಾಮವಾಗಿ ಪ್ರಶಾಂತ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ನ್ಯಾಯಾಂಗ ಬಂಧನಕ್ಕೆ ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 4 ರಂದು ಪೊಲೀಸರು ಆರೋಪಿ ಪತ್ನಿ ಸಂಧ್ಯಾ, ಆಕೆಯ ಪ್ರೇಮಿ ಅನಿಲ್ ಮತ್ತು ಬಂಟಿಯನ್ನು ಬಂಧಿಸಿದ್ದಾರೆ. ಮೂವರ ವಿರುದ್ಧವೂ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಲೆಯಾದ ದುರ್ದೈವಿಯನ್ನು 35 ವರ್ಷದ ಪ್ರಶಾಂತ್ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಅಂದರೆ ಜೂನ್ 27 ಅಥವಾ 28 ರಂದು ಗಲ್ಫ್ ದೇಶದಿಂದ ಊರಿಗೆ ಮರಳಿದ್ದ ಪ್ರಶಾಂತ್, ಪತ್ನಿ ಸಂಧ್ಯಾ ಹಾಗೂ ಆಕೆಯ ಪ್ರೇಮಿ ಅನಿಲ್ ನಡುವಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ. ಇದೇ ಕಾರಣಕ್ಕೆ ಸಂಧ್ಯಾ, ಪ್ರೇಮಿ ಅನಿಲ್ ಹಾಗೂ ಮತ್ತೊಬ್ಬ ಸಹಚರ ವೆಂಕಟ ಸಾಯಿ ಅಲಿಯಾಸ್ ಬಂಟಿ ಎಂಬುವವರ ಜೊತೆ ಸೇರಿ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಗನ ಸಾವಿನ ಬಗ್ಗೆ ತಾಯಿ ತೀವ್ರ ಅನುಮಾನಗೊಂಡು ಜುಲೈ 1 ರಂದು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಈ ಇಡೀ ಜಾಲ ಬಯಲಾಗಿದೆ. ಪೊಲೀಸರು ಬಂಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. "ಮಹಡಿಯ ಮೇಲೆ ನಮ್ಮಿಬ್ಬರ ನಡುವೆ ಜಗಳವಾಗಿತ್ತು, ಆಮೇಲೆ ಆತನ ಪತ್ನಿ ಸಂಧ್ಯಾ ಬಂದಳು. ನಾವಿಬ್ಬರೂ ಸೇರಿ ಆತನನ್ನು ಜೋರಾಗಿ ಕೆಳಗೆ ತಳ್ಳಿದೆವು. ಇದೆಲ್ಲವೂ ಸಂಧ್ಯಾಳದ್ದೇ ಸ್ಕೆಚ್ ಆಗಿತ್ತು, ಇದಕ್ಕಾಗಿ ಆಕೆ ನಮಗೆ ಹಣ ಕೂಡ ಕೊಟ್ಟಿದ್ದಾಳೆ" ಎಂದು ಬಂಟಿ ಬಾಯಿಬಿಟ್ಟಿದ್ದಾನೆ. ಈ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

