ನವದೆಹಲಿ: ಭಾರತೀಯ ಮೊಬೈಲ್ ಸಂಖ್ಯೆಗಳನ್ನು (Mobile Number) ಬಳಸಿಕೊಂಡು ಪಾಕಿಸ್ಥಾನದಲ್ಲಿ (Pakistan) ವಾಟ್ಸ್‌ಆಯಪ್ ಖಾತೆಗಳನ್ನು ತೆರೆಯಿಸಿ, ಅಲ್ಲಿಂದ ಭಾರತದವರನ್ನು ಸಂಪರ್ಕಿಸುತ್ತಿದ್ದ ಆರೋಪದ (Crime) ಮೇಲೆ ದೆಹಲಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಘಟಕದ ತನಿಖೆಯಲ್ಲಿ ಈ ಜಾಲದ ಹಿಂದೆ ಪಾಕಿಸ್ಥಾನ ಮೂಲದ ಹ್ಯಾಂಡ್ಲರ್‌ಗಳ ಸಂಪರ್ಕವಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ನು ದೆಹಲಿಯ ಸಾಹಿಲ್ (25) ಮತ್ತು ಆತನ ಪತ್ನಿ ಸಮೀರಾ (21) ಎಂದು ಗುರುತಿಸಲಾಗಿದೆ. 2024ರಿಂದ ಇಬ್ಬರೂ ಪಾಕಿಸ್ಥಾನ ಪರ ಗೂಢಚರ್ಯೆ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದರು ಎಂಬ ಆರೋಪವಿದೆ. ದುಬೈ ಮೂಲಕ ಪಾಕ್‌ಗೆ ಸಿಮ್‌ಗಳ ಸಾಗಣೆ ಪ್ರಕರಣದಲ್ಲಿ ಪೊಲೀಸರ ಗಮನ ಸೆಳೆದಿರುವ ಪ್ರಮುಖ ಅಂಶ ಭಾರತೀಯ ಸಿಮ್ ಕಾರ್ಡ್‌ಗಳ ಬಳಕೆ. 2024-25ರ ಅವಧಿಯಲ್ಲಿ ದಂಪತಿ ಎಂಟು ಭಾರತೀಯ ಸಿಮ್ ಕಾರ್ಡ್‌ಗಳನ್ನು ಪಡೆದು ದುಬೈ ಮೂಲಕ ಪಾಕಿಸ್ಥಾನಕ್ಕೆ ಕಳುಹಿಸಿದ್ದರು ಎನ್ನಲಾಗಿದೆ. ಈ ಸಿಮ್‌ಗಳಿಗಾಗಿ ಪಾಕಿಸ್ಥಾನದಲ್ಲಿರುವ ಹ್ಯಾಂಡ್ಲರ್‌ಗಳು ಅವರಿಗೆ ₹30 ಸಾವಿರ ಹಣ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ಸಂಖ್ಯೆಗಳ ಆಧಾರದಲ್ಲಿ ಪಾಕಿಸ್ಥಾನದಲ್ಲಿ ವಾಟ್ಸ್‌ಆಯಪ್ ಖಾತೆಗಳನ್ನು ಸಕ್ರಿಯಗೊಳಿಸಿ, ಅವುಗಳ ಮೂಲಕ ಭಾರತದಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಲಾಗಿತ್ತು ಎನ್ನಲಾಗಿದೆ. ಕೆಲವು ಖಾತೆಗಳ ಮೂಲಕ ಭಾರತೀಯ ವಾಟ್ಸ್‌ಆಯಪ್ ಗುಂಪುಗಳಿಗೆ ಪ್ರವೇಶ ಪಡೆಯಲು ಕೂಡ ಪ್ರಯತ್ನಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕಂಟೋನ್ಮೆಂಟ್‌ಗಳ ಮೇಲೆ ಕಣ್ಣು? ಸಾಹಿಲ್ ಕೇವಲ ಡಿಜಿಟಲ್ ಸಂಪರ್ಕಕ್ಕೆ ಸೀಮಿತವಾಗಿರದೆ, ಭಾರತದ ವಿವಿಧ ಪ್ರದೇಶಗಳಲ್ಲಿರುವ ಕಂಟೋನ್ಮೆಂಟ್‌ಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಜತೆಗೆ ಪಾಕಿಸ್ಥಾನ ಪರ ಗೂಢಚರ್ಯೆ ಹಾಗೂ ಫೀಲ್ಡ್ ಚಟುವಟಿಕೆಗಳಿಗೆ ವ್ಯಕ್ತಿಗಳನ್ನು ಸಂಪರ್ಕಿಸುವ ಜವಾಬ್ದಾರಿಯೂ ಆತನಿಗಿತ್ತು ಎನ್ನಲಾಗಿದೆ. ಕೋರ್ಟ್ ಮಾರ್ಷಲ್ ವಿಚಾರಣೆ ಎದುರಿಸುತ್ತಿದ್ದ ಕೆಲವು ಸೇನಾ ಸಿಬ್ಬಂದಿಗೆ ಸಂಬಂಧಿಸಿದ ಮಾಹಿತಿಯನ್ನೂ ಸಾಹಿಲ್ ಪಾಕಿಸ್ಥಾನಿ ಹ್ಯಾಂಡ್ಲರ್‌ಗಳಿಗೆ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪ್ರಕರಣದಲ್ಲಿ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ ಸೋರಿಕೆಯ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮೊಬೈಲ್ ಚಾಟ್‌ಗಳಿಂದ ಸಿಕ್ಕ ಸುಳಿವು ಸಾಹಿಲ್‌ನನ್ನು ದೆಹಲಿಯ ಸರಾಯ್ ಕಾಲೇ ಖಾನ್‌ನ ಚಾಂದ್ ಬೀಬಿ ಕ್ಯಾಂಪ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಆತನ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಪಾಕಿಸ್ಥಾನ ಮೂಲದ ವ್ಯಕ್ತಿಗಳೊಂದಿಗೆ ನಡೆದ ಸಂಭಾಷಣೆಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ಈ ಡಿಜಿಟಲ್ ಸುಳಿವುಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಮುಂದುವರಿಸಿದಾಗ ಸಮೀರಾಳ ಪಾತ್ರವೂ ಬೆಳಕಿಗೆ ಬಂದಿದೆ. ಆಕೆಯ ಮೊಬೈಲ್‌ನಲ್ಲಿಯೂ ಸಾಹಿಲ್ ಮತ್ತು ಪಾಕಿಸ್ಥಾನ ಮೂಲದ ಹ್ಯಾಂಡ್ಲರ್‌ಗಳ ನಡುವಿನ ಸಂಭಾಷಣೆಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. 2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸಾಹಿಲ್ ಪಾಕಿಸ್ಥಾನ ಮೂಲದ ಏಜೆಂಟ್‌ನ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ನಂತರ ಈ ಸಂಪರ್ಕ ಜಾಲದಲ್ಲಿ ಸಮೀರಾ ಕೂಡ ಭಾಗಿಯಾಗಿದ್ದಳು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಯಾರು ಸಂಪರ್ಕದಲ್ಲಿದ್ದರು, ಪಾಕಿಸ್ಥಾನಕ್ಕೆ ನಿಜವಾಗಿ ಯಾವ ರೀತಿಯ ಮಾಹಿತಿ ರವಾನೆಯಾಗಿದೆ ಮತ್ತು ಈ ಜಾಲದ ವ್ಯಾಪ್ತಿ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

