ಚಿಕ್ಕಬಳ್ಳಾಪುರ: ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, ಪುಂಡರ ಗುಂಪೊಂದು ಮನೆಗೇ ನುಗ್ಗಿ ಅಕ್ಕ-ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ (Crime) ನಡೆಸಿ, ಚಾಕುವಿನಿಂದ ಇರಿದಿರುವ ಭೀಕರ (Knife Stab) ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ನಡೆದಿದೆ.
ಗಾಂಜಾ ಮತ್ತಿನಲ್ಲಿ ತೇಲುತ್ತಿದ್ದ ಇಬ್ಬರು ಯುವಕರು ಹಾಗೂ ಅವರ ಗ್ಯಾಂಗ್ ಈ ದೌರ್ಜನ್ಯ ಎಸಗಿದೆ. ಘಟನೆಯಲ್ಲಿ 18 ವರ್ಷದ ಮೇಘನಾ ಎಂಬ ಯುವತಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ತಂಗಿ ನಿಹಾರಿಕಾ ಮೇಲೆಯೂ ತೀವ್ರ ಹಲ್ಲೆಯಾಗಿದೆ. ಸದ್ಯ ಇವರಿಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆನ್ನೆಗೆ ಬಾರಿಸಿದ್ದಕ್ಕೆ ತಡರಾತ್ರಿ 10 ಜನರ ಗ್ಯಾಂಗ್ ನಿಂದ ಅಟ್ಯಾಕ್! ವಿದ್ಯಾರ್ಥಿನಿ ಮೇಘನಾ ಕಾಲೇಜು ಮುಗಿಸಿಕೊಂಡು ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ದಾರಿಯಲ್ಲಿ ಗಾಂಜಾ ಮತ್ತಿನಲ್ಲಿದ್ದ ಕಾರ್ತಿಕ್ ಮತ್ತು ವಿನೋದ್ ಎಂಬ ಇಬ್ಬರು ಪೋಲಿ ಯುವಕರು ಆಕೆಯನ್ನು ಹಿಂಬಾಲಿಸಿದ್ದಾರೆ. "ಮೇಡಂ ಮೇಡಂ" ಎಂದು ಕೂಗುತ್ತಾ ಅನುಚಿತವಾಗಿ ವರ್ತಿಸಿದ ಪುಂಡರು, ಮೈಮೇಲೆ ಬೀಳುವಂತೆ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಮೇಘನಾ, ತಕ್ಷಣವೇ ಆ ಯುವಕನ ಕೆನ್ನೆಗೆ ಬಾರಿಸಿ ಬುದ್ಧಿ ಕಲಿಸಿದ್ದಾಳೆ. ಅಷ್ಟೇ ಅಲ್ಲದೆ, ಮನೆಗೆ ತಲುಪಿದ ಬಳಿಕ ಈ ಇಡೀ ಘಟನೆಯನ್ನು ತನ್ನ ತಾಯಿಗೂ ತಿಳಿಸಿದ್ದಾಳೆ. ತಮಗೆ ಹುಡುಗಿ ಕೆನ್ನೆಗೆ ಹೊಡೆದಳು ಎಂಬ ದ್ವೇಷ ಸಾಧಿಸಿದ ಆ ಪೋಲಿ ಯುವಕರು, ರಾತ್ರಿ 8:30ರ ಸುಮಾರಿಗೆ ಸುಮಾರು 10ಕ್ಕೂ ಹೆಚ್ಚು ಜನರ ಗ್ಯಾಂಗ್ ಕಟ್ಟಿಕೊಂಡು ಮೇಘನಾ ಅವರ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದವರ ಮೇಲೆ ಮುಗಿಬಿದ್ದ ಪುಂಡರ ಗುಂಪು, ತಂಗಿ ನಿಹಾರಿಕಾಳನ್ನು ಹಿಗ್ಗಾಮುಗ್ಗಾ ಥಳಿಸಿದೆ. ಬಳಿಕ ಮೇಘನಾಳ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಚಾಕುವಿನಿಂದ ಮನಸ್ಸೋಇಚ್ಛೆ ಇರಿದು ರಕ್ತದ ಮಡುವಿನಲ್ಲಿ ಕೆಡವಿ ಅಲ್ಲಿಂದ ಪರಾರಿಯಾಗಿದ್ದಾರೆ. 10ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲು ಕಿರುಚಾಟ ಕೇಳಿ ಓಡಿಬಂದ ಸ್ಥಳೀಯರು ತಕ್ಷಣವೇ ಗಾಯಾಳು ಅಕ್ಕ-ತಂಗಿಯರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೇಘನಾಳ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಹಲ್ಲೆ ಮತ್ತು ಚಾಕು ಇರಿತದ ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಕಾರ್ತೀಕ್, ವಿನೋದ್ ಸೇರಿದಂತೆ 10ಕ್ಕೂ ಅಧಿಕ ಜನರ ವಿರುದ್ಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜು ವಿದ್ಯಾರ್ಥಿನಿಯರ ಮೇಲೆ ಗಾಂಜಾಕೋರರು ನಡೆಸಿರುವ ಈ ಕೃತ್ಯದಿಂದಾಗಿ ಚಿಂತಾಮಣಿ ನಗರದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪುಂಡರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

