ತುಮಕೂರು: ಮಾದಕ ವಸ್ತುಗಳ (Drugs) ಚಟಕ್ಕೆ ದಾಸರಾಗಿ, ಆ ನಶೆಯ ಲೋಕದಲ್ಲಿ ತೇಲಾಡಲು ಹಣಕ್ಕಾಗಿ ದೇವಸ್ಥಾನಗಳನ್ನೇ ಲೂಟಿ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಒಂದನ್ನು ತುಮಕೂರು(Tumkur) ಜಿಲ್ಲೆಯ ತುರುವೆಕೆರೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ ಬರೋಬ್ಬರಿ 14 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು 19 ರಿಂದ 29 ವರ್ಷದೊಳಗಿನ ಯುವಕರಾಗಿದ್ದು, ಇವರೆಲ್ಲರೂ ಡ್ರಗ್ಸ್ ಚಟಕ್ಕೆ ಸಂಪೂರ್ಣ ದಾಸರಾಗಿದ್ದರು. ದೇವಸ್ಥಾನಗಳನ್ನು ದೋಚುವುದು, ಅದರಿಂದ ಬಂದ ಹಣದಲ್ಲಿ ಐಷಾರಾಮಿ ರೂಮ್‌ಗಳನ್ನು ಬುಕ್ ಮಾಡಿ ಮಾದಕ ಲೋಕದಲ್ಲಿ ತೇಲುವುದನ್ನೇ ಈ ಯುವಕರು ತಮ್ಮ ಮುಖ್ಯ ಕಾಯಕ ಮಾಡಿಕೊಂಡಿದ್ದರು. ತುಮಕೂರು ಜಿಲ್ಲೆಯಾದ್ಯಂತ ಭೀತಿ ಸೃಷ್ಟಿಸಿದ್ದ ಈ ಗ್ಯಾಂಗ್, ಒಂದಲ್ಲ ಎರಡಲ್ಲ ಬರೋಬ್ಬರಿ 22 ದೇವಸ್ಥಾನಗಳ ಬೀಗ ಮುರಿದು ಕಳವು ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದೆ. ದೇವಿಯ ತಾಳಿಯೇ ಇವರ ಮೊದಲ ಟಾರ್ಗೆಟ್! ಮತ್ತೊಂದು ದರೋಡೆಗೆ ಹೊಂಚು ಹಾಕುವಾಗ ಬಿತ್ತು ಪೊಲೀಸರ ಬಲೆ ಬಂಧಿತರಿಂದ ದೇವಸ್ಥಾನಗಳಿಂದ ಕದ್ದಿದ್ದ 25 ಚಿನ್ನದ ತಾಳಿಗಳು ಸೇರಿದಂತೆ ಒಟ್ಟು 14 ಲಕ್ಷ ರೂಪಾಯಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರಿಂದ ಇನ್ನುಳಿದ ಹಲವು ಕಳವು ಪ್ರಕರಣಗಳ ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸನ ಹಾಗೂ ಮಂಡ್ಯ ಮೂಲದ ಆರು ಮಂದಿ ಯುವಕರು ಈ ಗ್ಯಾಂಗ್‌ನಲ್ಲಿದ್ದು, ಪ್ರಮುಖ ಆರೋಪಿಗಳಾದ ಲಯನ್ ಅಲಿಯಾಸ್ ಎಟಿಎಂ, ಮಂಜುನಾಥ್ ಮಾಗಡಿ, ಚಂದನ್, ಮಧುಸೂದನ್, ಬಾಬು ಹಾಗೂ ನರಸಿಂಹ ಮೂರ್ತಿ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೇವಸ್ಥಾನಗಳ ಹುಂಡಿ ಹಣವನ್ನು ದೋಚುವುದರ ಜೊತೆಗೆ, ಗರ್ಭಗುಡಿಯಲ್ಲಿದ್ದ ದೇವಿಯ ಮೂರ್ತಿಯ ಚಿನ್ನದ ತಾಳಿಗಳ ಮೇಲೆ ಈ ಕಳ್ಳರು ಕಣ್ಣಿಡುತ್ತಿದ್ದರು. ಮೊದಲು ದೇವಿಯ ತಾಳಿಗಳನ್ನೇ ಟಾರ್ಗೆಟ್ ಮಾಡಿ ಕದಿಯುವುದು ಇವರ ಸ್ಟೈಲ್ ಆಗಿತ್ತು.
ಆರೋಪಿಗಳು ಒಟ್ಟಾಗಿ ಸೇರಿ ಮತ್ತೊಂದು ದೊಡ್ಡ ದರೋಡೆಗೆ ಸ್ಕೆಚ್ ಹಾಕಿ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ತುರುವೆಕೆರೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ಮತ್ತು ತಂಡ, ಕಳ್ಳರ ಅಡಗುತಾಣದ ಮೇಲೆ ದಾಳಿ ನಡೆಸಿ ಇಡೀ ಗ್ಯಾಂಗ್ ಅನ್ನು ಲಾಕ್ ಮಾಡಿದ್ದಾರೆ.

