Dailyhunt Logo
  • Light mode
    Follow system
    Dark mode
    • Play Story
    • App Story
CRIME: ಗಂಡನ ಮುಖಕ್ಕೆ ಆಯಸಿಡ್ ಸುರಿದು ಕುರುಡಾಗಿಸಿದ್ದ ಹೆಂಡತಿಗೆ ಜೀವಾವಧಿ ಶಿಕ್ಷೆ!

CRIME: ಗಂಡನ ಮುಖಕ್ಕೆ ಆಯಸಿಡ್ ಸುರಿದು ಕುರುಡಾಗಿಸಿದ್ದ ಹೆಂಡತಿಗೆ ಜೀವಾವಧಿ ಶಿಕ್ಷೆ!

Navasamaja.com 4 months ago

ಉತ್ತರ ಪ್ರದೇಶ: ಇಲ್ಲಿನ ಸಂಭಾಲ್ ಜಿಲ್ಲೆಯ ಫಾಸ್ಟ್‌ ಟ್ರ್ಯಾಕ್ ನ್ಯಾಯಾಲಯವು ತನ್ನ ಪತಿಗೆ ಆಸಿಡ್ ಸುರಿದು ಭೀಕರವಾಗಿ ಹಲ್ಲೆ ನಡೆಸಿದ್ದ ಮಹಿಳೆಗೆ (Crime) ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಸೋಮವಾರ ಮಹತ್ವದ ತೀರ್ಪು ನೀಡಿದೆ.

1.75 ಲಕ್ಷ ರೂಪಾಯಿ ಭಾರಿ ದಂಡ

ನಿದ್ರಿಸುತ್ತಿದ್ದ ಗಂಡನ ಮೇಲೆ ಆಸಿಡ್ ದಾಳಿ ನಡೆಸಿ ಆತನ ಮುಖ ಸಂಪೂರ್ಣ ವಿಕಾರಗೊಳ್ಳಲು ಮತ್ತು ಆತ ಶಾಶ್ವತವಾಗಿ ಅಂಧನಾಗಲು ಕಾರಣಳಾದ ಕಾಹಕಂಶಾ (30) ಎಂಬಾಕೆಗೆ ಕೋರ್ಟ್ ಜೀವಾವಧಿ ಶಿಕ್ಷೆಯ ಜೊತೆಗೆ 1.75 ಲಕ್ಷ ರೂಪಾಯಿ ಭಾರಿ ದಂಡವನ್ನೂ ವಿಧಿಸಿದೆ. ಚಂದೌಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲ್ ಜಿ ಅವರು ಮೇ 27 ರಂದೇ ಈಕೆಯನ್ನು ಅಪರಾಧಿ ಎಂದು ಘೋಷಿಸಿದ್ದು, ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.

ಏನಿದು ಘಟನೆ?
ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದ್ರ ಕುಮಾರ್ ಯಾದವ್ ಅವರು ನೀಡಿರುವ ಮಾಹಿತಿ ಪ್ರಕಾರ, ಈ ಭೀಕರ ಘಟನೆಯು 2025ರ ಮಾರ್ಚ್ 7ರಂದು ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆರೋಪಿ ಮಹಿಳೆ ಕಾಹಕಂಶಾ, ತನ್ನ ಪತಿ ಮುಜಾಫರ್ (35) ಮನೆಯಲ್ಲಿ ಮಲಗಿದ್ದಾಗ ಆತನನ್ನು ಕೊಲ್ಲುವ ಉದ್ದೇಶದಿಂದ ಮುಖಕ್ಕೆ ಆಸಿಡ್ ಸುರಿದಿದ್ದಳು. ಮೊದಲ ಬಾರಿ ಆಸಿಡ್ ಸುರಿದಾಗ ತೀವ್ರ ನರಕಯಾತನೆಯಿಂದ ಮುಜಾಫರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಆಕ್ರೋಶಗೊಂಡಿದ್ದ ಮಹಿಳೆ ಆತನನ್ನು ಬೆನ್ನಟ್ಟಿ ಮತ್ತೊಮ್ಮೆ ಆಸಿಡ್ ಸುರಿದಿದ್ದಾಳೆ. ಈ ಭೀಕರ ದಾಳಿಯಿಂದಾಗಿ ಮುಜಾಫರ್ ಅವರ ಮುಖ ಸಂಪೂರ್ಣವಾಗಿ ಸುಟ್ಟು ವಿಕಾರಗೊಂಡಿದ್ದಲ್ಲದೆ, ಅವರು ಎರಡೂ ಕಣ್ಣುಗಳ ದೃಷ್ಟಿ ಶಾಶ್ವತವಾಗಿ ಕಳೆದುಕೊಂಡಿದ್ದರು

ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರ ನಡುವೆ ದೈನಂದಿನ ಜೀವನದಲ್ಲಿ ಸದಾ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆರೋಪಿ ಮಹಿಳೆಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧವಿದ್ದು, ಆ ಕಾರಣಕ್ಕಾಗಿ ಆಕೆ ಪತಿಯಿಂದ ವಿಚ್ಛೇದನ ಪಡೆಯಲು ಬಯಸಿದ್ದಳು ಎಂದು ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 2025ರ ಮಾರ್ಚ್ 20ರಂದು ನಖಾಸಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಪರಾಧದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ಮಹಿಳೆಗೆ ಯಾವುದೇ ಕರುಣೆ ತೋರದೆ ಜೀವಾವಧಿ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja