ಮೈಸೂರು : ಅರಮೆನೆ ನಗರಿ ಮೈಸೂರಿನ (Mysuru) ಕೆಆರ್‌ನಗರದ ಲಾಲನಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳ್ಳತನಕ್ಕೆ (Chain Snatching) ಯತ್ನಿಸಿದ ಇಬ್ಬರು ಕಿಡಿಗೇಡಿಗಳನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಲಾಲನಹಳ್ಳಿ ಗ್ರಾಮದ ಮಾಜಿ ಪಂಚಾಯತಿ ಸದಸ್ಯ ಉಮೇಶ್ ಅವರ ಪತ್ನಿ ಅನ್ನಪೂರ್ಣ ಎಂಬುವವರೇ ಕಳ್ಳರ ಸಂಚಿಗೆ ಒಳಗಾದವರು. ಅನ್ನಪೂರ್ಣ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು, ಅವರ ಕರಳಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅನ್ನಪೂರ್ಣ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿದ ಕೂಡಲೇ ಜಾಗೃತರಾದ ಗ್ರಾಮಸ್ಥರು ಮತ್ತು ಹಾದಿಹೋಕರು ಕೂಡಲೇ ಕಳ್ಳರನ್ನು ಹಿಂಬಾಲಿಸಿದ್ದಾರೆ. ಎಷ್ಟೇ ವೇಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದ ಸಾರ್ವಜನಿಕರು, ಸಿನಿಮಾ ಮಾದರಿಯಲ್ಲಿ ಖದೀಮರನ್ನು ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಕ್ಕಿಬಿದ್ದ ಆರೋಪಿಗಳನ್ನು ಹಾಸನ ಜಿಲ್ಲೆಯ ಸಾತಿ ಗ್ರಾಮದ ನವೀನ್ ಮತ್ತು ಆತನ ಸಹಚರ ಎಂದು ಗುರುತಿಸಲಾಗಿದೆ. ಬಂಧಿತ ಕಳ್ಳರಿಗೆ ಸಾರ್ವಜನಿಕರು ಸರಿಯಾಗಿ ಧರ್ಮದೇಟು ನೀಡಿದ ನಂತರ, ಕೆ.ಆರ್. ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

