ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (ಚಿತ್ರದುರ್ಗ), ಸಿಡಿಟಿ ಕಾಂಗ್ರೆಸ್ ಮುಖಂಡರೊಬ್ಬರ (Congrees Leader) ಮೃತದೇಹ (Crime) ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ನಗರದ ಹೊರವಲಯದ ನಿರ್ಜನ ಪ್ರದೇಶವೊಂದರಲ್ಲಿ ಗುರುತು ಸಿಗದ ಸ್ಥಿತಿಯಲ್ಲಿದ್ದ ಮೃತದೇಹ ಕಂಡುಬಂದಿದ್ದು, ಮೇಲ್ನೋಟಕ್ಕೆ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯನ್ನು ಚಿತ್ರದುರ್ಗದ ನಿವಾಸಿ, 50 ವರ್ಷದ ಶಿವಲಿಂಗಪ್ಪ ಎಂದು ಗುರುತಿಸಲಾಗಿದೆ. ಶಿವಲಿಂಗಪ್ಪ ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡರಾಗಿದ್ದಲ್ಲದೆ, ನಗರದಲ್ಲಿ ರಸಗೊಬ್ಬರದ ಅಂಗಡಿಯನ್ನು ನಡೆಸುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದ ಹಿನ್ನಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಇಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಶಿವಲಿಂಗಪ್ಪ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವು ಗುರುತು ಕೂಡ ಸಿಗದಂತಹ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಮತ್ತು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ದುಷ್ಕರ್ಮಿಗಳು ಇವರನ್ನು ಯಾವುದೋ ಮಾರಕಾಸ್ತ್ರಗಳಿಂದ ಹೊಡೆದು ಕೊಂದು ಇಲ್ಲಿಗೆ ತಂದು ಎಸೆದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಶಿವಲಿಂಗಪ್ಪ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅವರ ಸಂಬಂಧಿಕರು ಹಾಗೂ ಬೆಂಬಲಿಗರು ಧಾವಿಸಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಇವರ ನಾಪತ್ತೆ ಮತ್ತು ಸಾವಿನ ಹಿಂದೆ ಯಾರ ಕೈವಾಡವಿದೆ? ಹಳೆಯ ಹಗೆತನವೇನಾದರೂ ಇದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಅಧಿಕೃತವಾಗಿ ತಿಳಿದುಬರಲಿದೆ.

