ಹಾಸನ: ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ (Allegation) ಮಾಡಿರುವ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ವಿಷ ಸೇವಿಸಿ (Poison) ಆತ್ಮಹತ್ಯೆಗೆ (Crime) ಯತ್ನಿಸಿರುವ ಘಟನೆ ಹಾಸನ (Hassan) ಜಿಲ್ಲೆಯಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕಿನ ಕೊಡುವಿನ ಹೊಸಹಳ್ಳಿ ನಿವಾಸಿ ಅಮರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಅಮರ್ ಹಲವು ಆರೋಪಗಳನ್ನು ಮಾಡಿದ್ದು, ತಮ್ಮ ಸಾವಿಗೆ ಹುಣಸೂರು ಡಿವೈಎಸ್ಪಿ ರವೀಶ್, ಅಜಯ್, ಮನೋಹರ, ಪ್ರಸಾದ್ ಹಾಗೂ ಮಂಜುನಾಥ್ ಕಾರಣ ಎಂದು ಲೈವ್ ವಿಡಿಯೋದಲ್ಲಿ ಹೇಳಿದ್ದಾರೆ. ಅಮರ್ ಹೇಳಿಕೆಯ ಪ್ರಕಾರ, ಕೆಲ ಸಮಯದ ಹಿಂದೆ ಅವರಿಗೆ ಅಪಘಾತವಾಗಿತ್ತು. ಈ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಅಪಘಾತಕ್ಕೆ ಕಾರಣರಾದವರ ಪರವಾಗಿ ಪೊಲೀಸರು ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಮಗೆ ನ್ಯಾಯ ಒದಗಿಸದೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ ಅಮರ್, ಲೈವ್ ವಿಡಿಯೋದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಅಮರ್ ಮಾಡಿರುವ ಆರೋಪಗಳು ಹಾಗೂ ಪ್ರಕರಣದ ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.

