ಉತ್ತರ ಪ್ರದೇಶ: ಇಲ್ಲಿನ ಬದೌನ್ ಜಿಲ್ಲೆಯ ಬಡ ರೈತರೊಬ್ಬರಿಗೆ (Crime) ಆದಾಯ ತೆರಿಗೆ ಇಲಾಖೆ ಶಾಕ್ (Fraud) ನೀಡಿದ್ದು, ಅವರ ಜೀವಮಾನದಲ್ಲಿಯೇ ಎಂದಿಗೂ ಊಹಿಸಿರದಷ್ಟು ತೆರಿಗೆ ನೋಟಿಸ್ ನೀಡಿದ್ದು, ಇದರಿಂದ ರೈತ ಕಂಗಾಲಾಗಿದ್ದಾರೆ.
ದೆಹಲಿಯಲ್ಲಿ ರೈತನ ಹೆಸರಿನಲ್ಲಿ ನಕಲಿ ಕಂಪನಿ
ವಜೀರ್‌ಗಂಜ್ ಪ್ರದೇಶದ ಖುರ್ರಂಪುರ ಭಮೋರಿ ನಿವಾಸಿ ಭೋಲಾ ಸಿಂಗ್ ಎಂಬುವವರ ಹೆಸರಿನಲ್ಲಿ ದೆಹಲಿಯಲ್ಲಿ ಯಾರೋ ಅಪರಿಚಿತರು ನಕಲಿ ಕಂಪನಿ ತೆರೆದು ಕೋಟಿಗಟ್ಟಲೆ ವಹಿವಾಟು ನಡೆಸಿದ್ದು, ಈಗ ಅದರ ತೆರಿಗೆ ಪಾವತಿಸುವಂತೆ ರೈತನಿಗೆ ನೋಟಿಸ್ ಜಾರಿಯಾಗಿದೆ. ರೈತ ಭೋಲಾ ಸಿಂಗ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ 1.02 ಕೋಟಿ ರೂಪಾಯಿ ಹಾಗೂ ಜಿಎಸ್‌ಟಿ ಕಚೇರಿಯಿಂದ 13.63 ಕೋಟಿ ರೂಪಾಯಿ ಸೇರಿ ಒಟ್ಟು 14.66 ಕೋಟಿ ರೂಪಾಯಿ ಬಾಕಿ ಪಾವತಿಸುವಂತೆ ನೋಟಿಸ್ ಬಂದಿದೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ, ದೆಹಲಿಯ ನಾರಾಯಣ ಇಂಡಸ್ಟ್ರಿಯಲ್ ಏರಿಯಾದಲ್ಲಿ ಭೋಲಾ ಸಿಂಗ್ ಅವರ ಹೆಸರಿನಲ್ಲೇ 'ರಾಮ್ ಸ್ಟೋರ್' ಎಂಬ ಸಂಸ್ಥೆ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ತಾನು ಈವರೆಗೆ ದೆಹಲಿಗೇ ಹೋಗಿಲ್ಲ ಮತ್ತು ಯಾವುದೇ ವ್ಯವಹಾರವನ್ನೂ ಮಾಡಿಲ್ಲ ಎಂದು ಸಂತ್ರಸ್ತ ರೈತ ಅಲವತ್ತುಕೊಂಡಿದ್ದಾರೆ. ತನಿಖೆಗೆ ವಿಶೇಷ ತಂಡ ರಚನೆ ಪ್ರಾಥಮಿಕ ತನಿಖೆಯಲ್ಲಿ ವಂಚಕರು ರೈತನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿ ಈ ನಕಲಿ ಕಂಪನಿ ಸ್ಥಾಪಿಸಿರುವುದು ದೃಢಪಟ್ಟಿದೆ. ಈ ಸಂಬಂಧ ರೈತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಮೊದಲು ದೂರು ದಾಖಲಿಸಿಕೊಳ್ಳಲು ನಿರಾಕರಿಸಲಾಗಿತ್ತು. ನಂತರ ಜಿಲ್ಲಾಧಿಕಾರಿ ಅವನೀಶ್ ರೈ ಅವರಿಗೆ ಭೋಲಾ ಸಿಂಗ್ ಲಿಖಿತ ಅರ್ಜಿ ಸಲ್ಲಿಸಿದ್ದು, ಸದ್ಯ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿಗಳು ಇಬ್ಬರು ಸದಸ್ಯರ ವಿಶೇಷ ತಂಡವನ್ನು ರಚಿಸಿದ್ದಾರೆ. ತಮ್ಮ ಇಡೀ ಆಸ್ತಿ ಮಾರಿದರೂ ಇಷ್ಟು ದೊಡ್ಡ ಮೊತ್ತವನ್ನು ತೀರಿಸಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿರುವ ರೈತ ಭೋಲಾ ಸಿಂಗ್, ಈ ವಂಚನೆಯ ಜಾಲದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜಿಲ್ಲಾಡಳಿತವು ಇದೊಂದು ವ್ಯವಸ್ಥಿತ ವಂಚನೆ ಮತ್ತು ದಾಖಲೆಗಳ ದುರುಪಯೋಗ ಎಂದು ಗುರುತಿಸಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದೆ.

