ವರಂಗಲ್: ಆರ್ಥಿಕ ಸಂಕಷ್ಟ ಹಾಗೂ ಸಾಲಗಾರರ ಒತ್ತಡದಿಂದ ಮನನೊಂದ ದಂಪತಿ (couple) ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತೆಲಂಗಾಣದ ವರಂಗಲ್ (Warangal) ನಗರದ ರಂಗಶಾಯಿಪೇಟೆಯಲ್ಲಿ ನಡೆದಿದೆ.
ಸಂಜಯ್ ಕುಮಾರ್ ಮತ್ತು ಶೋಭಾ ಆತ್ಮಹತ್ಯೆ ಮಾಡಿಕೊಂಡ ದಂಪತಿ.
ತಮ್ಮೊಂದಿಗೆ ಪ್ರೀತಿಯಿಂದ ಸಾಕಿದ್ದ ಲ್ಯಾಬ್ರಡಾರ್ ತಳಿಯ ಸಾಕು ನಾಯಿಗೂ ವಿಷ ನೀಡಿ ಕೊಂದಿರುವುದಾಗಿ ತಿಳಿದುಬಂದಿದೆ.
ಸಾಲದ ಒತ್ತಡಕ್ಕೆ ನಲುಗಿದ ದಂಪತಿ
ವರಂಗಲ್‌ನ ರಂಗಶಾಯಿಪೇಟೆಯ ಎಸ್‌ಬಿಐ ಬ್ಯಾಂಕ್ ಸಮೀಪ ಸಂಜಯ್ ಕುಮಾರ್ ಮತ್ತು ಶೋಭಾ ವಾಸವಾಗಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದು, ಅವರು ಆಂಧ್ರಪ್ರದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಸಂಜಯ್ ಕುಮಾರ್ ಖಾಸಗಿ ಚಾಲಕರಾಗಿ ಕೆಲಸ ಮಾಡುತ್ತಾ ಕುಟುಂಬವನ್ನು ನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಕೆಲವು ಆರ್ಥಿಕ ಅಗತ್ಯಗಳಿಗಾಗಿ ದಂಪತಿ ಪರಿಚಯಸ್ಥರು ಹಾಗೂ ಸ್ಥಳೀಯರ ಬಳಿ ಸಾಲ ಪಡೆದಿದ್ದರು. ಆದರೆ ಪಡೆದ ಸಾಲವನ್ನು ಮರುಪಾವತಿ ಮಾಡುವಂತೆ ಸಾಲ ನೀಡಿದವರಿಂದ ನಿರಂತರ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ನಾಲ್ಕು ಪುಟಗಳ ಡೆತ್‌ನೋಟ್ ಪತ್ತೆ
ಆತ್ಮಹತ್ಯೆಗೂ ಮುನ್ನ ದಂಪತಿ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಆರ್ಥಿಕ ಸಂಕಷ್ಟವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಅಲ್ಲದೆ, ಬಡ್ಡಿ ವ್ಯವಹಾರ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಟೈಲರ್ ಒಬ್ಬರು ತಮಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನೂ ಡೆತ್‌ನೋಟ್‌ನಲ್ಲಿ ಮಾಡಿರುವುದಾಗಿ ವರದಿಯಾಗಿದೆ. ಈ ಆರೋಪಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ಆರಂಭ
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಿಲ್ಸ್ ಕಾಲೋನಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳು, ದಂಪತಿ ಪಡೆದಿದ್ದ ಸಾಲ, ಹಣಕಾಸಿನ ವ್ಯವಹಾರಗಳು ಹಾಗೂ ಆತ್ಮಹತ್ಯೆಗೆ ಕಾರಣವಾದ ಇತರ ಸಂಗತಿಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಸ್ಥಳೀಯವಾಗಿ ದುಃಖದ ವಾತಾವರಣ ನಿರ್ಮಾಣವಾಗಿದೆ.
: MURUGESH NIRANI: ಎಲ್ಲಾ ಸುಳ್ಳು.. ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಇಲ್ಲ ಎಂದ ನಿರಾಣಿ

