ಹಾಸನ: ಶಾಸಕ ಕೆ.ಎಂ ಶಿವಲಿಂಗೇಗೌಡರ (Shivalinge Gowda) ಬಲಗೈ ಬಂಟನ ಪುತ್ರ ಸೂಫಿಯಾನ್ ಸಮಿವುಲ್ಲಾ ಎಂಬಾತ ದಂಪತಿಗಳ ಮೇಲೆ ಮನಸ್ಸೋಯಿಚ್ಛೆ ಹಲ್ಲೆ ನಡೆಸಿರುವ ಘಟನೆ ಅರಸೀಕೆರೆ (Arsikere) ಪಟ್ಟಣದಲ್ಲಿ ನಡೆದಿದೆ.
ದೇವಸ್ಥಾನಕ್ಕೆ (Temple) ತೆರಳಿ ವಾಪಸ್ ಬರುತ್ತಿದ್ದ ದಂಪತಿಯೊಂದಿಗೆ ಜಗಳ ಮಾಡಿ ಪುಂಡರ ಗ್ಯಾಂಗ್ ಕರೆಸಿ ರಕ್ತ ಬರುವಂತೆ ಥಳಿಸಿದ್ದಾನೆ.
ಈ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ನಡೆದಿದ್ದೇನು? ಸಣ್ಣ ವಿಚಾರವನ್ನೇ ಮುಂದಿಟ್ಟುಕೊಂಡು ದಂಪತಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿ ಸೂಫಿಯಾನ್ ಸಮಿವುಲ್ಲಾ ವ್ಯಕ್ತಿಯನ್ನ ಹಿಡಿದು ಎಳೆದಾಡಿ ಮನಬಂದಂತೆ ಥಳಿಸಿದ್ದಾನೆ. ಇಷ್ಟಕ್ಕೂ ಸುಮ್ಮನಾಗದೇ ಫೋನ್ ಮಾಡಿ ತನ್ನ ಪುಂಡರ ಗ್ಯಾಂಗ್ ಕರೆಸಿ ಹಲ್ಲೆ ಮಾಡಿಸಿದ್ದಾನೆ, ಪತ್ನಿ ಕೈಮುಗಿದು ಬೇಡಿಕೊಂಡರೂ ಬಿಡದೇ ರಕ್ತ ಬರುಬಂತೆ ಹಲ್ಲೆ ಮಾಡಿದ್ದಾರೆ. ಇನ್ನೂ ಅಮಾಯಕ ದಂಪತಿ ಮೇಲೆ ಸೂಫಿಯಾನ್ ಮತ್ತವನ ಪಟಾಲಂನಿಂದ ಹಲ್ಲೆ ಘಟನೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೀಗಾಗಿ ನೂರಾರು ಸಂಖ್ಯೆಯ ಜನ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ದಂಪತಿಗಳಿಬ್ಬರು ಅರಸೀಕೆರೆ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ರಥೋತ್ಸವದಲ್ಲಿ ಭಾಗಿಯಾಗಲು ಬಂದಿದ್ದರು. ರಥೋತ್ಸವ, ದೇವರ ಪೂಜೆ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದರು. ಈ ವೇಳೆ ತನ್ನ ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದ ಸಮಿವುಲ್ಲಾ ಅರಸೀಕೆರೆ ಪಟ್ಟಣದ ಎಪಿಎಂಸಿ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್ಗೆ ಟಚ್ ಮಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾನೆ.

