Dailyhunt
CRIME: ಸ್ಲಿಮ್‌ ಪೌಡರ್‌ ಹೆಸರಲ್ಲಿ ದೋಖಾ, ಗೋಧಿಹಿಟ್ಟು ಮಾರುತ್ತಿದ್ದ ಗ್ಯಾಂಗ್‌ ಅಂದರ್

CRIME: ಸ್ಲಿಮ್‌ ಪೌಡರ್‌ ಹೆಸರಲ್ಲಿ ದೋಖಾ, ಗೋಧಿಹಿಟ್ಟು ಮಾರುತ್ತಿದ್ದ ಗ್ಯಾಂಗ್‌ ಅಂದರ್

Navasamaja.com 0 months ago

ತುಮಕೂರು: ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸುವ ಆಸೆಗೆ ಬಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಅಂತರರಾಜ್ಯ ನಕಲಿ ಜಾಲವೊಂದನ್ನು ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಪೊಲೀಸರು ಬೇಧಿಸಿದ್ದಾರೆ. ಖ್ಯಾತ ಜೀನಿ ಸಂಸ್ಥೆಯ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ (Crime) ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಆರೋಪಿಗಳ ಬಂಧನ

ದೆಹಲಿಯ ಸೌಂದರ್ಯ ವರ್ಧಕ ಸಾಮಗ್ರಿಗಳ ಸೇಲ್ಸ್‌ಮ್ಯಾನ್ ರಾಜೀವ್ ಖನ್ನಾ ಹಾಗೂ ಆತನ ಮಕ್ಕಳಾದ ಹಿಮಾಂಶು ಖನ್ನಾ ಮತ್ತು ಮನನ್ ಖನ್ನಾ ಬಂಧಿತ ಖದೀಮರು. ಈ ಆರೋಪಿಗಳು ಆರ್.ಕೆ. ಟ್ರೇಡರ್ಸ್, ಎಂ.ಕೆ. ಟ್ರೇಡರ್ಸ್ ಮತ್ತು ಎಂಎಚ್‌ಕೆ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಆನ್‌ಲೈನ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ನಕಲಿ ಜಾಲ ಬಯಲಾಗಿದ್ದು ಹೇಗೆ?

ಜೀನಿ ಕಂಪನಿಯ ಟ್ರೇಡ್‌ಮಾರ್ಕ್ ಮತ್ತು ಲೇಬಲ್‌ಗಳನ್ನು ಬಳಸಿ ನಕಲಿ 'ಸ್ಲಿಮ್ ಪೌಡರ್' ಮಾರಾಟವಾಗುತ್ತಿರುವ ಬಗ್ಗೆ ಕಂಪನಿಯ ಮಾಲೀಕರಾದ ದಿಲೀಪ್ ಕುಮಾರ್ ಅವರು ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವೊಂದು ತನಿಖೆ ಕೈಗೊಂಡಿತ್ತು. ಈ ತಂಡವು ದೆಹಲಿಯಲ್ಲಿದ್ದ ನಕಲಿ ಉತ್ಪನ್ನ ತಯಾರಿಕಾ ಗೋಡೌನ್ ಮೇಲೆ ದಾಳಿ ನಡೆಸಿ, ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಪೊಲೀಸರ ವಿಚಾರಣೆಯ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದ್ದು, ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ, ಕೇವಲ ಗೋಧಿ ಹಿಟ್ಟನ್ನು ಡಬ್ಬಿಗಳಿಗೆ ತುಂಬಿಸಿ ಅದಕ್ಕೆ ಜೀನಿ ಸ್ಲಿಮ್ ಪೌಡರ್ ಎಂಬ ನಕಲಿ ಲೇಬಲ್ ಅಂಟಿಸುತ್ತಿದ್ದರು. ಅಷ್ಟೇ ಅಲ್ಲದೆ, ಸಾರ್ವಜನಿಕರು ನಿತ್ಯ ಬಳಸುವ ಆಯುರ್ವೇದ ಮಾತ್ರೆಗಳು, ಸೌಂದರ್ಯ ವರ್ಧಕ ಕ್ರೀಮ್‌ಗಳು ಮತ್ತು ಆಯುರ್ವೇದ ಪೌಡರ್‌ಗಳ ಹೆಸರಿನಲ್ಲೂ ಗೋಧಿ ಹಿಟ್ಟನ್ನೇ ತುಂಬಿ ಮಾರಾಟ ಮಾಡುತ್ತಿದ್ದರು. ಈ ಮೂಲಕ ಜೀನಿ ಕಂಪನಿಗೆ ಸುಮಾರು 15 ಲಕ್ಷ ರೂ. ಹಾಗೂ ಇತರ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ಯಾವುದೇ ಮುನ್ನೆಚ್ಚರಿಕೆ ಅಥವಾ ಅನುಮತಿ ಇಲ್ಲದೆ ಆನ್‌ಲೈನ್‌ನಲ್ಲಿ ಈ ಉತ್ಪನ್ನಗಳನ್ನು ಮಾರುತ್ತಿದ್ದರು. ಇಂತಹ ನಕಲಿ ಆಹಾರ ಪದಾರ್ಥಗಳಿಂದ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ, ಎಂದು ಎಸ್‌ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಬಂಧಿತರಾದ ಆರೋಪಿಗಳನ್ನು ಅಲ್ಲಿನ ರೋಹಿಣಿ ಕೋರ್ಟ್‌ಗೆ ಹಾಜರುಪಡಿಸಿ, ಟ್ರಾನ್ಸಿಟ್ ವಾರೆಂಟ್ ಪಡೆದು ಕಳ್ಳಂಬೆಳ್ಳಕ್ಕೆ ಕರೆತರಲಾಗಿದೆ. ಬಳಿಕ ಶಿರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಇಂತಹ ಉತ್ಪನ್ನಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja