Dailyhunt
CRUDE OIL: ಭಾರತದ ಹಡಗು ಚೀನಾಗೆ ಹೋಗಿಲ್ಲ, ಸ್ಪಷ್ಟನೆ ನೀಡಿದ ಕೇಂದ್ರ ಸಚಿವಾಲಯ

CRUDE OIL: ಭಾರತದ ಹಡಗು ಚೀನಾಗೆ ಹೋಗಿಲ್ಲ, ಸ್ಪಷ್ಟನೆ ನೀಡಿದ ಕೇಂದ್ರ ಸಚಿವಾಲಯ

Navasamaja.com 1 week ago

ವದೆಹಲಿ: ಇರಾನ್‌ನ ಕಚ್ಚಾ ತೈಲ (Crude oil) ಹೊತ್ತ ಹಡಗು ಹಣ ಪಾವತಿ ಸಮಸ್ಯೆಯಿಂದಾಗಿ ಭಾರತದ ಬದಲು ಚೀನಾದತ್ತ ಮುಖ ಮಾಡಿದೆ ಎಂಬ ವರದಿಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಶನಿವಾರ ತಳ್ಳಿಹಾಕಿದೆ.

ಯಾವುದೇ ಸಮಸ್ಯೆ ಇಲ್ಲ ಎಂದ ಇಲಾಖೆ

ಈ ರೀತಿಯ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ದೇಶದ ಇಂಧನ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಚಿವಾಲಯವು ಸಾರ್ವಜನಿಕರಿಗೆ ಭರವಸೆ ನೀಡಿದೆ. ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ನೀಡಿರುವ ಸಚಿವಾಲಯವು, ಇರಾನ್‌ನಿಂದ ಗುಜರಾತ್‌ನ ವಾಡಿನಾರ್ ಬಂದರಿಗೆ ಬರಬೇಕಿದ್ದ 'ಪಿಂಗ್ ಶುನ್' ಎಂಬ ತೈಲ ನೌಕೆಯು ಪಾವತಿ ವಿವಾದ ಕಾರಣದಿಂದ ಚೀನಾದ ಕಡೆ ದಾರಿ ಬದಲಿಸಿದೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೂ ಭಾರತದ ತೈಲ ಸಂಸ್ಕರಣಾಗಾರಗಳು ತಮಗೆ ಅಗತ್ಯವಿರುವ ಕಚ್ಚಾ ತೈಲವನ್ನು ಈಗಾಗಲೇ ಶೇಖರಣೆ ಮಾಡಲಾಗಿದೆ. ಭಾರತವು ಪ್ರಸ್ತುತ ವಿಶ್ವದ 40ಕ್ಕೂ ಹೆಚ್ಚು ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ವಾಣಿಜ್ಯ ಮತ್ತು ತಾಂತ್ರಿಕ ಕಾರಣಗಳಿಗಾಗಿ ಸಮುದ್ರದ ಮಧ್ಯದಲ್ಲಿ ಹಡಗುಗಳ ಪಥ ಅಥವಾ ತಲುಪಬೇಕಾದ ಬಂದರುಗಳು ಬದಲಾಗುವುದು ಜಾಗತಿಕ ತೈಲ ವ್ಯಾಪಾರದಲ್ಲಿ ಸಾಮಾನ್ಯ ಸಂಗತಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅನಿಲ ಪೂರೈಕೆಯಲ್ಲಿ ಸಮಸ್ಯೆ ಆಗಲ್ಲ

ಇನ್ನು ಅಡುಗೆ ಅನಿಲದ (LPG) ಪೂರೈಕೆಯ ಬಗ್ಗೆ ಕೇಳಿಬರುತ್ತಿದ್ದ ಆತಂಕಗಳಿಗೂ ಸಚಿವಾಲಯವು ಉತ್ತರ ನೀಡಿದೆ. ಸುಮಾರು 44,000 ಟನ್ ಇರಾನ್ ಎಲ್‌ಪಿಜಿ ಹೊತ್ತ 'ಸೀ ಬರ್ಡ್' ನೌಕೆಯು ಏಪ್ರಿಲ್ 2ರಂದು ಮಂಗಳೂರು ಬಂದರು ತಲುಪಿದ್ದು, ಅನಿಲವನ್ನು ಇಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಷ್ಟೇ ಅಲ್ಲದೆ, 'ಗ್ರೀನ್ ಸಾನ್ವಿ' ಎಂಬ ಮತ್ತೊಂದು ಎಲ್‌ಪಿಜಿ ನೌಕೆಯು ಶುಕ್ರವಾರ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಶೀಘ್ರದಲ್ಲೇ ಭಾರತವನ್ನು ತಲುಪಲಿದೆ. ಇದು ಭಾರತದ ಧ್ವಜ ಹೊಂದಿರುವ ಏಳನೇ ಅನಿಲ ನೌಕೆಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja