ಬೆಂಗಳೂರು : ಐಪಿಎಲ್ (IPL) ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ (Lalit Modi) ಸ್ಫೋಟಕ ಆರೋಪ ಮಾಡಿದ್ದಾರೆ. ಸಿಎಸ್‌ಕೆ ತಂಡವು ಪಂದ್ಯಗಳನ್ನು ಗೆಲ್ಲಲು ಅಂಪೈರ್‌ಗಳನ್ನು ಫಿಕ್ಸ್ ಮಾಡುತ್ತಿತ್ತು ಎಂಬ ಗಂಭೀರ ಅಪಾದನೆಯನ್ನು ಮಾಡಿದ್ದು, ಕ್ರಿಕೆಟ್ ವಲಯದಲ್ಲಿ ಇದು ಸಂಚಲನ ಮೂಡಿಸಿದೆ.
ಇತ್ತೀಚಿನ ಪೋಡ್‌ಕಾಸ್ಟ್ ಒಂದರಲ್ಲಿ ಮಾತನಾಡಿರುವ ಲಲಿತ್ ಮೋದಿ, ಸಿಎಸ್‌ಕೆ ಪಂದ್ಯಗಳಿಗೆ ಉದ್ದೇಶಪೂರ್ವಕವಾಗಿ ಚೆನ್ನೈ ಮೂಲದ ಅಂಪೈರ್‌ಗಳನ್ನೇ ನೇಮಿಸಲಾಗುತ್ತಿತ್ತು ಎಂದು ದೂರಿದ್ದಾರೆ.
ಆರಂಭದಲ್ಲಿ ಇದು ಸಾಮಾನ್ಯವೆನಿಸಿದರೂ, ಪ್ರತಿ ಪಂದ್ಯದಲ್ಲೂ ಇದೇ ಪ್ರವೃತ್ತಿ ಮುಂದುವರಿದಾಗ ಇದು ವ್ಯವಸ್ಥಿತವಾಗಿ ನಡೆಯುತ್ತಿದ್ದ 'ಅಂಪೈರ್ ಫಿಕ್ಸಿಂಗ್' ಎಂಬುದು ನನ್ನ ಗಮನಕ್ಕೆ ಬಂತು ಎಂದು ಲಲಿತ್ ಮೋದಿ ಹೇಳಿದ್ದಾರೆ. ತಂಡದ ಪರವಾಗಿ ತೀರ್ಪು ಬರುವಂತೆ ತಮಗೆ ಬೇಕಾದ ಅಂಪೈರ್‌ಗಳನ್ನು ಮ್ಯಾನೇಜ್ ಮೇಂಟ್ ನೇಮಿಸಿಕೊಳ್ಳುತ್ತಿದ್ದರು ತಿಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್. ಶ್ರೀನಿವಾಸನ್ ಅವರು ಈ ಅಂಪೈರ್ ಫಿಕ್ಸಿಂಗ್ ನಡೆಸುತ್ತಿದ್ದರು ಎಂದು ಲಲಿತ್ ಮೋದಿ ನೇರವಾಗಿ ಆರೋಪಿಸಿದ್ದಾರೆ. ಈ ಕಳ್ಳಾಟವನ್ನು ಬಹಿರಂಗಪಡಿಸಲು ನಾನು ಯತ್ನಿಸಿದಾಗ, ಅಂದು ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್ ನನ್ನ ವಿರುದ್ಧವೇ ತಿರುಗಿಬಿದ್ದರು.
ಸಿಎಸ್‌ಕೆ ಫ್ರಾಂಚೈಸಿಯ ಹಗರಣವನ್ನು ಬೆಳಕಿಗೆ ತಂದಿದ್ದಕ್ಕಾಗಿಯೇ ಅವರು ನನ್ನನ್ನು ಕಡು ವಿರೋಧಿಯಂತೆ ಕಂಡು, ನನ್ನ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದರು ಎಂದು ಲಲಿತ್ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿದ್ದ ಕಾರಣಕ್ಕಾಗಿ ಸಿಎಸ್‌ಕೆ ತಂಡವು 2016 ಮತ್ತು 2017ರ ಅವಧಿಯಲ್ಲಿ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿತ್ತು. ಈಗ ಮತ್ತೆ ಅಂಪೈರ್ ಫಿಕ್ಸಿಂಗ್ ಎಂಬ ಗಂಭೀರ ಆರೋಪ ಕೇಳಿಬಂದಿರುವುದು ಫ್ರಾಂಚೈಸಿಯ ಘನತೆಗೆ ಧಕ್ಕೆ ತಂದಿದೆ.
ಲಲಿತ್ ಮೋದಿ ಅವರ ಈ ಸ್ಫೋಟಕ ಹೇಳಿಕೆ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

