Dailyhunt Logo
  • Light mode
    Follow system
    Dark mode
    • Play Story
    • App Story
CYBER CRIME : ಚಾಟ್‌ಜಿಪಿಟಿ ಬಳಸಿ 46,000ಕ್ಕೂ ಹೆಚ್ಚು ಅನಿಮೆ ಖಾತೆಗಳನ್ನುಹ್ಯಾಕ್ ಮಾಡಿದ 15ರ ಬಾಲಕ ಅರೆಸ್ಟ್‌!

CYBER CRIME : ಚಾಟ್‌ಜಿಪಿಟಿ ಬಳಸಿ 46,000ಕ್ಕೂ ಹೆಚ್ಚು ಅನಿಮೆ ಖಾತೆಗಳನ್ನುಹ್ಯಾಕ್ ಮಾಡಿದ 15ರ ಬಾಲಕ ಅರೆಸ್ಟ್‌!

Navasamaja.com 5 days ago

ಟೋಕಿಯೋ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ 'ಚಾಟ್‌ಜಿಪಿಟಿ' (ChatGPT) ಯನ್ನು ದುರುಪಯೋಗಪಡಿಸಿಕೊಂಡು ಪ್ರಸಿದ್ಧ ಅನಿಮೆ ಸ್ಟ್ರೀಮಿಂಗ್ (Anime Accounts) ಸಂಸ್ಥೆಯೊಂದನ್ನು ಹ್ಯಾಕ್‌ ಮಾಡಿದ್ದ(Cyber crime) 15 ವರ್ಷದ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನನ್ನು ಜಪಾನ್ ಪೊಲೀಸರು ಬಂಧಿಸಿದ್ದಾರೆ.

ಈತ ಜಪಾನ್‌ನ ಪ್ರಸಿದ್ಧ 'ಬಂಡಾಯ್ ನಾಮ್ಕೊ ಫಿಲ್ಮ್‌ವರ್ಕ್ಸ್' (Bandai Namco Filmworks) ಒಡೆತನದ 'ಬಂಡಾಯ್ ಚಾನೆಲ್' ಸ್ಟ್ರೀಮಿಂಗ್ ಸೇವೆಗೆ ಕನ್ನ ಹಾಕಿ, ಬರೋಬ್ಬರಿ 46,812 ಬಳಕೆದಾರರ ಖಾತೆಗಳನ್ನು ರದ್ದುಗೊಳಿಸಿದ್ದಾನೆ (Cancel) ಎಂದು ತಿಳಿದುಬಂದಿದೆ.

ಚಾಟ್‌ಜಿಪಿಟಿ ಬಳಸಿ ಬಾಲಕ ಮಾಡಿದ್ದೇನು ಗೊತ್ತಾ?
ಟೋಕಿಯೋ ಮೆಟ್ರೋಪಾಲಿಟನ್ ಪೊಲೀಸರ ಪ್ರಕಾರ, ಈ ಬಾಲಕ ನವೆಂಬರ್ 2025 ರಲ್ಲಿ ಬಂಡಾಯ್ ಚಾನೆಲ್‌ನ ಭದ್ರತಾ ಲೋಪವನ್ನು (Security Flaw) ಪತ್ತೆಹಚ್ಚಿ ಹ್ಯಾಕ್‌ ಮಾಡಲು ಯೋಜನೆ ರೂಪಿಸಿದ್ದ. ಖಾತೆಗಳನ್ನು ರದ್ದುಗೊಳಿಸುವ ಪ್ರೋಗ್ರಾಂ ಬರೆಯಲು ಈತ ಚಾಟ್‌ಜಿಪಿಟಿಯ ಸಹಾಯ ಪಡೆದಿದ್ದನು. ನವೆಂಬರ್ 4, 2025 ರಂದು ಈತ ಸರ್ವರ್‌ಗೆ ಸರಣಿ ಕಮಾಂಡ್‌ಗಳನ್ನು ಕಳುಹಿಸುವ ಮೂಲಕ ಸಾವಿರಾರು ಸಬ್‌ಸ್ಕ್ರಿಪ್ಷನ್‌ಗಳನ್ನು ಏಕಾಏಕಿ ರದ್ದುಗೊಳಿಸಿದ್ದಾನೆ. ಇದರಿಂದಾಗಿ ಕಂಪನಿಯು ಡಿಸೆಂಬರ್‌ವರೆಗೆ ತನ್ನ ಸೇವೆಗಳನ್ನು ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಈ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಪೊಲೀಸ್ ತನಿಖೆಯ ವೇಳೆ ಈ ಬಾಲಕ ಸಿಕ್ಕಿ ಬಿದಿದ್ದಾನೆ. ತನಗೆ ಕಂಪನಿಯ ಮೇಲಾಗಲಿ ಅಥವಾ ಬೇರೆ ಯಾರ ಮೇಲಾಗಲಿ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ. 4ನೇ ತರಗತಿಯಿಂದಲೇ ಕಂಪ್ಯೂಟರ್ ಬಳಸಲು ಆರಂಭಿಸಿ ಸ್ವತಃ ಪ್ರೋಗ್ರಾಮಿಂಗ್ ಕಲಿತಿದ್ದೇನೆ. ನನಗೆ ಸುಲಭವಾಗಿ ಲಾಗಿನ್ ಆಗಲು ಹೆಚ್ಚಿನ ಖಾತೆಗಳು ಸಿಕ್ಕಿದ್ದರಿಂದ ನಾನು ಈ ಪ್ಲಾಟ್‌ಫಾರ್ಮ್ ಅನ್ನು ಟಾರ್ಗೆಟ್ ಮಾಡಿದೆ ಅಷ್ಟೇ. ಖಾತೆಗಳನ್ನು ರದ್ದುಗೊಳಿಸುವ ಸೋರ್ಸ್ ಕೋಡ್ ಅನ್ನು ನಾನೇ ಸಿದ್ಧಪಡಿಸಿದ್ದೆ. ಆದರೆ ಅದಕ್ಕೆ ಹೆಚ್ಚು ಸಮಯ ಹಿಡಿಯುತ್ತಿತ್ತು. ಹಾಗಾಗಿ ನಾನು ಚಾಟ್‌ಜಿಪಿಟಿ ಸಹಾಯ ಪಡೆದು, ಬೇರೊಂದು ಪ್ರೋಗ್ರಾಮಿಂಗ್ ಭಾಷೆಯಲ್ಲಿ ಕೋಡಿಂಗ್ ಪ್ರಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಿದೆ ಎಂದು ಹೇಳಿದ್ದಾನೆ.

ಬಾಲಕ ಹ್ಯಾಕ್‌ ಮಾಡುವ ಸಮಯದಲ್ಲಿ ಕಂಪನಿಯು ಬಾಲಕನ ಐಪಿ (IP) ವಿಳಾಸವನ್ನು ಬ್ಲಾಕ್ ಮಾಡಿತ್ತಾದರೂ, ಈತ ಸುಮಾರು 30 ಕ್ಕೂ ಹೆಚ್ಚು ಬಾರಿ ತನ್ನ ಐಪಿ ವಿಳಾಸವನ್ನು ಬದಲಾಯಿಸಿ ಸೈಬರ್ ದಾಳಿಯನ್ನು ಮುಂದುವರಿಸಿದ್ದ ಎನ್ನಲಾಗಿದೆ. ಇದೇ ಬಾಲಕನನ್ನು ಕಳೆದ ಜೂನ್ ತಿಂಗಳಿನಲ್ಲೂ ಬೇರೆ ಸೈಬರ್ ಅಪರಾಧದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

ಗ್ರಾಹಕರಿಗೆ ಕಂಪನಿ ನೀಡಿದ ಭರವಸೆ ಏನು?
ಈ ಸೈಬರ್ ದಾಳಿಯ ನಂತರ ಎಚ್ಚೆತ್ತುಕೊಂಡಿರುವ ಬಂಡಾಯ್ ನಾಮ್ಕೊ ಫಿಲ್ಮ್‌ವರ್ಕ್ಸ್, ತೊಂದರೆಗೊಳಗಾದ ಗ್ರಾಹಕರಿಗೆ ಪ್ರತ್ಯೇಕವಾಗಿ ಇಮೇಲ್ ಕಳುಹಿಸಿದೆ ಹಾಗೂ ಫಿಶಿಂಗ್ (Phishing) ಇಮೇಲ್‌ಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಿದೆ. ಖಾತೆ ಕಳೆದುಕೊಂಡ ಗ್ರಾಹಕರಿಗೆ ಮರು-ನೋಂದಣಿ (Re-register) ಮಾಡಿಕೊಳ್ಳಲು ಕೋರಲಾಗಿದೆ. ಸೇವೆ ವ್ಯತ್ಯಯವಾದ ಅವಧಿಯ ಚಂದಾದಾರಿಕೆ ಶುಲ್ಕವನ್ನು (Subscription Fees) ಗ್ರಾಹಕರಿಗೆ ಮರುಪಾವತಿ (Refund) ಮಾಡುವುದಾಗಿ ಕಂಪನಿ ಘೋಷಿಸಿದೆ.

ಸದ್ಯಕ್ಕೆ ಯಾವುದೇ ಗ್ರಾಹಕರ ವೈಯಕ್ತಿಕ ಮಾಹಿತಿ ಇಂಟರ್ನೆಟ್‌ನಲ್ಲಿ ಲೀಕ್ ಆಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ತಂತ್ರಜ್ಞಾನದ ಅತಿ ಬುದ್ಧಿವಂತಿಕೆಯನ್ನು ದುಷ್ಕೃತ್ಯಕ್ಕೆ ಬಳಸಿಕೊಂಡ ಈ ಅಪ್ರಾಪ್ತನ ನಡೆ ಸದ್ಯ ಜಪಾನ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja