ದಾವಣಗೆರೆ: ಜಿಲ್ಲೆಯ (Davangere) ಹೊನ್ನಾಳಿ ತಾಲೂಕಿನ ಖಾಸಗಿ ಬ್ಯಾಂಕ್ (Private Bank) ಸಿಬ್ಬಂದಿ ಮೋಹನ್ ಕುಮಾರ್ ಬ್ಯಾಂಕ್ ಕಿರುಕುಳ ಹಾಗೂ ಸಾಲದ ಬಾಧ್ಯತೆಗೆ ಬೇಸತ್ತು ವಿಡಿಯೋ ಮಾಡಿ (Missing) ನಾಪತ್ತೆಯಾಗಿದ್ದಾರೆ.
ಆರ್‌ಡಿ ಮೋಹನ್ ಕುಮಾರ್ (37) ನಾಪತ್ತೆಯಾದ ದುರ್ದೈವಿ. ಹೊನ್ನಾಳಿ ತಾಲೂಕಿನ ಮಾದನಭಾವಿ ಗ್ರಾಮದ ನಿವಾಸಿಯಾಗಿದ್ದಾರೆ.
ನಾಪತ್ತೆಯಾಗುವ ಮುನ್ನ ಮೋಹನ್ ಕುಮಾರ್ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಬ್ಯಾಂಕ್‌ನಲ್ಲಿ ಮ್ಯಾನೇಜರ್ ಪೋಸ್ಟ್ ಪಡೆಯಲು 50 ಸಾವಿರ ರೂಪಾಯಿ ಸಾಲ ಮಾಡಿ ನಕಲಿ ಮಾರ್ಕ್ಸ್ ಕಾರ್ಡ್ ಮಾಡಿಸಿಕೊಟ್ಟಿದ್ದೆ. ಆದರೆ ಪ್ರಮೋಶನ್ ಸಿಗಲಿಲ್ಲ, ಬದಲಾಗಿ ಸಾಲ ಹೆಚ್ಚಾಯಿತು. ನನ್ನ ಈ ಸ್ಥಿತಿಗೆ ಮತ್ತು ಸಾಲದ ಸುಳಿಗೆ ಐಡಿಎಫ್‌ಸಿ (IDFC) ಬ್ಯಾಂಕ್ ಹಾಗೂ ಸಹ ಸಿಬ್ಬಂದಿ ತಿಪ್ಪೇಶ್ ಮತ್ತು ಕೊಟ್ರೇಶ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬ್ಯಾಂಕ್‌ನವರು ಲಂಚ ಪಡೆದು ಮೋಸ ಮಾಡಿದ್ದಾರೆ. ಎಷ್ಟೋ ನೌಕರರು ತಮ್ಮ ಕೈಯಿಂದ ಹಣ ಹಾಕಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮುಂದೆ ನಿಂತು ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ. ಹೊನ್ನಾಳಿ ತಾಲೂಕಿನ ತುಂಗಾ ಮೇಲ್ದಂಡೆ ಕಾಲುವೆಗೆ ಬೈಕ್ ಸಮೇತ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೊನ್ನಾಳಿಯ ತುಂಗಾ ನಾಲೆಯಲ್ಲಿ ಬೈಕ್ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವುದರ ಹಿಂದಿನ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಬ್ಯಾಂಕ್ ಸಿಬ್ಬಂದಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.

